135 ವಿದ್ಯುತ್ ಸ್ಥಾವರಗಳ ಪೈಕಿ 115ರಲ್ಲಿಯ ಕಲ್ಲಿದ್ದಲು ದಾಸ್ತಾನು ಒಂದು ವಾರಕ್ಕೂ ಸಾಲುವುದಿಲ್ಲ: ವರದಿ

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ,ಅ.12: ದೇಶದಲ್ಲಿಯ 135 ವಿದ್ಯುತ್ ಸ್ಥಾವರಗಳ ಪೈಕಿ 115 ಸ್ಥಾವರಗಳಲ್ಲಿರುವ ಕಲ್ಲಿದ್ದಲು ದಾಸ್ತಾನು ಒಂದು ವಾರಕ್ಕೂ ಸಾಲುವುದಿಲ್ಲ ಎಂದು ಕೇಂದ್ರೀಯ ವಿದ್ಯುತ್ ಪ್ರಾಧಿಕಾರವು ಮಾಹಿತಿ ನೀಡಿದೆ. ಪ್ರಧಾನಿ ಕಚೇರಿಯು ದೇಶದಲ್ಲಿಯ ಕಲ್ಲಿದ್ದಲು ಸ್ಥಿತಿಯ ಬಗ್ಗೆ ಇಂದು ಪುನರ್ಪರಿಶೀಲನೆ ನಡೆಸುವ ಸಾಧ್ಯತೆಯಿದೆ ಎಂದು scroll.in ವರದಿ ಮಾಡಿದೆ.
17 ಸ್ಥಾವರಗಳಲ್ಲಿ ಒಂದು ದಿನಕ್ಕೂ ಸಾಲುವಷ್ಟು ಕಲ್ಲಿದ್ದಲು ದಾಸ್ತಾನು ಇಲ್ಲ ಮತ್ತು 26 ಸ್ಥಾವರಗಳಲ್ಲಿ ದಾಸ್ತಾನು ಕೇವಲ ಒಂದು ದಿನಕ್ಕೆ ಸಾಲುವಷ್ಟಿದೆ. 22 ಸ್ಥಾವರಗಳಲ್ಲಿ ಎರಡು ದಿನಗಳಿಗೆ,18 ಸ್ಥಾವರಗಳಲ್ಲಿ ಮೂರು ದಿನಗಳಿಗೆ,13 ಸ್ಥಾವರಗಳಲ್ಲಿ ನಾಲ್ಕು ದಿನಗಳಿಗೆ ಮತ್ತು 11 ಸ್ಥಾವರಗಳಲ್ಲಿ ಅರು ದಿನಗಳಿಗೆ ಸಾಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಉಳಿದುಕೊಂಡಿದೆ ಎಂದು ಪ್ರಾಧಿಕಾರವು ತನ್ನ ವರದಿಯಲ್ಲಿ ತಿಳಿಸಿದೆ.
ದೇಶದಲ್ಲಿ ತೀವ್ರ ವಿದ್ಯುತ್ ಬಿಕ್ಕಟ್ಟು ತಲೆದೋರುವ ಆತಂಕ ಸೃಷ್ಟಿಯಾಗಿದ್ದು, ಮಹಾರಾಷ್ಟ್ರ,ಪಂಜಾಬ್, ರಾಜಸ್ಥಾನ, ಕೇರಳ, ದಿಲ್ಲಿ, ಆಂಧ್ರಪ್ರದೇಶ ಮತ್ತು ತಮಿಳುನಾಡು ಈಗಾಗಲೇ ಸಂಭಾವ್ಯ ವಿದ್ಯುತ್ ವ್ಯತ್ಯಯದ ಎಚ್ಚರಿಕೆಯನ್ನು ನೀಡಿವೆ.
ಕಳೆದ ಕೆಲವು ದಿನಗಳಿಂದ ಪಂಜಾಬ್, ತಮಿಳುನಾಡು ಮತ್ತು ರಾಜಸ್ಥಾನ ವಿದ್ಯುತ್ ನಿಲುಗಡೆಯನ್ನು ಹೇರುತ್ತಿವೆ.
ತೀವ್ರಗೊಂಡಿರುವ ವಿದ್ಯುತ್ ಬೇಡಿಕೆ ಮತ್ತು ಸೆಪ್ಟಂಬರ್ ನಲ್ಲಿ ಗಣಿ ಪ್ರದೇಶಗಳಲ್ಲಿ ಭಾರೀ ಮಳೆಯಾಗಿರುವುದು ಕಲ್ಲಿದ್ದಲಿನ ಕೊರತೆಗೆ ಕಾರಣವಾಗಿದೆ ಎಂದು ಕೇಂದ್ರ ವಿದ್ಯುತ್ ಸಚಿವಾಯವು ಹೇಳಿದೆ. ಆದರೆ ಕೇಂದ್ರ ವಿದ್ಯುತ್ ಕಾರ್ಯದರ್ಶಿ ಅಲೋಕ ಕುಮಾರ ಅವರು, ವಿದ್ಯುತ್ ಪೂರೈಕೆಯಲ್ಲಿ ತೀವ್ರ ಬಿಕ್ಕಟ್ಟಿನ ಸ್ಥಿತಿಯೇನಿಲ್ಲ ಎಂದು ಸೋಮವಾರ ಸುದ್ದಿಸಂಸ್ಥೆಗೆ ತಿಳಿಸಿದರು.
ಅಕ್ಟೋಬರ್ ಮೊದಲ ವಾರದಲ್ಲಿ ವಿದ್ಯುತ್ ಕೊರತೆ ಅಲ್ಪಮಟ್ಟಿಗೆ ಹೆಚ್ಚಾಗಿದೆ. ಸಾಮಾನ್ಯವಾಗಿ ವಿದ್ಯುತ್ ಕೊರತೆ ಶೇ.0.2ರಿಂದ 0.3ರಷ್ಟು ಇರುತ್ತಿತ್ತು, ಆದರೆ ಈಗಲೂ ಅದು ಶೇ.1ಕ್ಕಿಂತ ಕಡಿಮೆಯೇ ಇದೆ ಎಂದರು.
ಕೆಲವು ರಾಜ್ಯಗಳಲ್ಲಿ ಸಮಸ್ಯೆಗಳಿವೆಯಾದರೂ ಒಟ್ಟಾರೆ ಪರಿಸ್ಥಿತಿಯು ನಿಯಂತ್ರಣದಲ್ಲಿದೆ. ರಾಜಸ್ಥಾನ ಮತ್ತು ಉತ್ತರ ಪ್ರದೇಶದಂತಹ ಕೆಲವು ರಾಜ್ಯಗಳು ಕಲ್ಲಿದ್ದಲು ಕಂಪನಿಗಳಿಗೆ ತಮ್ಮ ಬಾಕಿಯನ್ನು ಪಾವತಿಸಿಲ್ಲ, ಹೀಗಾಗಿ ಅವುಗಳಿಗೆ ಪೂರೈಕೆಯಲ್ಲಿ ವ್ಯತ್ಯಯವುಂಟಾಗಿದೆ ಎಂದು ಕುಮಾರ್ ತಿಳಿಸಿದರು.