ಶಂಕಿತ ಪಾಕಿಸ್ತಾನಿ ಉಗ್ರನನ್ನು ಬಂಧಿಸಿದ ದಿಲ್ಲಿ ಪೊಲೀಸರು

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಹಬ್ಬದ ಸಮಯದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಯೋಜಿಸುತ್ತಿದ್ದ ಶಂಕಿತ ಪಾಕಿಸ್ತಾನಿ ಭಯೋತ್ಪಾದಕನನ್ನು ದಿಲ್ಲಿ ಪೊಲೀಸರ ವಿಶೇಷ ಸೆಲ್ ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ಇಲ್ಲಿ ತಿಳಿಸಿದ್ದಾರೆ.
ಶಂಕಿತ ಭಯೋತ್ಪಾದಕನನ್ನು ರಾಷ್ಟ್ರ ರಾಜಧಾನಿಯ ಲಕ್ಷ್ಮಿ ನಗರ ಪ್ರದೇಶದಿಂದ ಬಂಧಿಸಲಾಗಿದೆ.
ಅಧಿಕಾರಿಯ ಪ್ರಕಾರ ನಕಲಿ ದಾಖಲೆಗಳ ಮೂಲಕ ನಕಲಿ ಭಾರತೀಯ ಗುರುತಿನ ಚೀಟಿಗಳನ್ನು ಪಡೆದ ಶಂಕಿತ ಪಾಕಿಸ್ತಾನಿ ಪ್ರಜೆಯನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನಿವಾಸಿ ಮುಹಮ್ಮದ್ ಅಶ್ರಫ್ ಅಲಿಯಾಸ್ ಅಲಿ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿ ರಾಷ್ಟ್ರ ರಾಜಧಾನಿಯ ಶಾಸ್ತ್ರಿ ನಗರದಲ್ಲಿ ಅಲಿ ಅಹಮದ್ ನೂರಿ ಎಂಬ ಹೆಸರಿನಲ್ಲಿ ಭಾರತೀಯ ಪ್ರಜೆಯಾಗಿ ವಾಸಿಸುತ್ತಿದ್ದ ಎಂದು ಆರೋಪಿಸಲಾಗಿದೆ.
"ಬಂಧನದ ಸಮಯದಲ್ಲಿ ಪೊಲೀಸರು ಎಕೆ 47 ರೈಫಲ್ ಮತ್ತು ಇತರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡರು" ಎಂದು ವಿಶೇಷ ವಿಭಾಗದ ಉಪ ಪೊಲೀಸ್ ಆಯುಕ್ತ ಪ್ರಮೋದ್ ಕುಶ್ವಾಹ ಹೇಳಿದರು.
ಯುಎಪಿಎ ಕಾಯ್ದೆ, ಸ್ಫೋಟಕ ಕಾಯ್ದೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.