ಯುವರಾಜ್ ಸಿಂಗ್ ರನ್ನು ಬಂಧಿಸಿದರೆ ಮಧ್ಯಂತರ ಜಾಮೀನಿನಲ್ಲಿ ಬಿಡುಗಡೆಗೊಳಿಸಬಹುದು: ಹೈಕೋರ್ಟ್
ಜಾತಿ ನಿಂದನೆ ಪ್ರಕರಣ
ಯುವರಾಜ್ ಸಿಂಗ್ (File Photo: PTI)
ಹೊಸದಿಲ್ಲಿ: ಇನ್ಸ್ಟಾಗ್ರಾಂ ಲೈವ್ ಕಾರ್ಯಕ್ರಮವೊಂದರಲ್ಲಿ ಸಂಭಾಷಣೆಯಲ್ಲಿ ಸಹ ಆಟಗಾರರೊಬ್ಬರ ಕುರಿತಂತೆ ಜಾತಿಯನ್ನು ಮುಂದಿಟ್ಟುಕೊಂಡು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆಂಬ ಆರೋಪ ಮಾಡಿ ವಕೀಲರೊಬ್ಬರು ನೀಡಿದ ದೂರಿನ ಆಧಾರದಲ್ಲಿ ಎಫ್ಐಆರ್ ಎದುರಿಸುತ್ತಿರುವ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ 'ಔಪಚಾರಿಕ ಬಂಧನ'ಕ್ಕೆ ಹರ್ಯಾಣ ಪೊಲೀಸರು ಅನುಮತಿ ಕೇಳಿರುವ ಹಿನ್ನೆಲೆಯಲ್ಲಿ ಆದೇಶ ನೀಡಿರುವ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್, ತನಿಖೆಯ ಭಾಗವಾಗಿ ಯುವರಾಜ್ ಅವರನ್ನು ಬಂಧಿಸಿದರೆ ಅವರು ಅಗತ್ಯ ಬಾಂಡ್ ನೀಡಿದಲ್ಲಿ ಅವರನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗುವುದು ಎಂದು ಹೇಳಿದೆ.
ಮುಂದಿನ ವಿಚಾರಣೆಯನ್ನು ನ್ಯಾಯಾಲಯ ನವೆಂಬರ್ 18ಕ್ಕೆ ನಿಗದಿಪಡಿಸಿದೆ. ಪೊಲೀಸ್ ವರಿಷ್ಠಾಧಿಕಾರಿ ತಮ್ಮ ಅಫಿಡವಿಟ್ನಲ್ಲಿ `ಔಪಚಾರಿಕ ಬಂಧನ' ಎಂದು ಬರೆದಿದ್ದಾರೆ. ಈ ಕುರಿತು ಆಕೆಗೆ ಇನ್ನೂ ಏನಾದರೂ ಹೇಳಲಿದ್ದರೆ ಇನ್ನೊಂದು ಅಫಿಡವಿಟ್ ಸಲ್ಲಿಸಬಹುದು,'' ಎಂದು ನ್ಯಾಯಾಲಯ ಹೇಳಿದೆ.
ಯುವರಾಜ್ ಅವರು ಸಂಭಾಷಣೆ ವೇಳೆ ಆಡಿದ ಮಾತುಗಳು ಪರಿಶಿಷ್ಟ ಜಾತಿ, ವರ್ಗಗಳ ಮೇಲಿನ ಯಾವುದೇ ದ್ವೇಷ ಅಥವಾ ಸಿಟ್ಟಿನಿಂದಲ್ಲ, ಬದಲು ಒಬ್ಬ ಮದ್ಯದ ಅಮಲಿನಲ್ಲಿರುವ ವ್ಯಕ್ತಿಗೆ ಸಂಬಂಧಿಸಿದಂತೆ ಈ ಪದ ಬಳಸಲಾಗಿದೆ ಎಂದು ಯುವರಾಜ್ ಪರ ವಕೀಲರು ವಾದಿಸಿದ್ದಾರೆ.
ತಮ್ಮ ವಿರುದ್ಧ ದಾಖಲಿಸಿರುವ ಎಫ್ಐಆರ್ ಅನ್ನು ರದ್ದುಗೊಳಿಸಬೇಕೆಂದು ಕೋರಿ ಯುವರಾಜ್ ಅವರು ಹೈಕೋರ್ಟ್ ಕದ ತಟ್ಟಿದ್ದರು.