ತಮಿಳುನಾಡು ಸ್ಥಳೀಯ ಸಂಸ್ಥೆಗಳ ಚುನಾವಣೆ:ಕೇವಲ ಒಂದೇ ಮತ ಪಡೆದು ಟ್ರೋಲ್ ಆದ ಬಿಜೆಪಿ ಅಭ್ಯರ್ಥಿ
photo: twitter
ಚೆನ್ನೈ: ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕೊಯಮತ್ತೂರು ಜಿಲ್ಲೆಯ 9ನೇ ವಾರ್ಡ್ ನಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿಜೆಪಿ ಪದಾಧಿಕಾರಿಯೊಬ್ಬರು ತಮ್ಮ ಕುಟುಂಬದಲ್ಲಿ ಐವರು ಸದಸ್ಯರಿದ್ದರೂ ಕೇವಲ ಒಂದು ಮತವನ್ನು ಪಡೆದು ಟ್ವಿಟರ್ ನಲ್ಲಿ ಟ್ರೋಲ್ ಆಗಿದ್ದಾರೆ.
ಬಿಜೆಪಿ ಯುವ ಘಟಕದ ಜಿಲ್ಲಾ ಉಪಾಧ್ಯಕ್ಷ ಡಿ.ಕಾರ್ತಿಕ್ ಕೊಯಮತ್ತೂರು ಜಿಲ್ಲೆಯ ಕುರುಡಂಪಾಳ್ಯದಲ್ಲಿ ಗ್ರಾಮ ಪಂಚಾಯಿತಿ ವಾರ್ಡ್ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದರು.
ಟ್ವಿಟ್ಟರ್ ನಲ್ಲಿ #Single_Vote_BJP ಟ್ರೆಂಡಿಂಗ್ ನೊಂದಿಗೆ ಈ ಸುದ್ದಿ ವೈರಲ್ ಆಗಿದೆ.
ಬರಹಗಾರ್ತಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ಮೀನಾ ಕಂದಸಾಮಿ ಟ್ವೀಟ್ ಮಾಡಿ, "ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೇವಲ ಒಂದು ಮತ ಪಡೆದಿದ್ದಾರೆ. ಇತರರಿಗೆ ಮತ ಹಾಕಲು ನಿರ್ಧರಿಸಿದ ಅವರ ಮನೆಯ ಇತರ ನಾಲ್ವರು ಮತದಾರರ ಬಗ್ಗೆ ಹೆಮ್ಮೆ ಇದೆ’’ ಎಂದು ಟ್ವೀಟಿಸಿದ್ದಾರೆ.
"ಬಿಜೆಪಿ ಅಭ್ಯರ್ಥಿಯ ಕುಟುಂಬದಲ್ಲಿ ಐವರು ಸದಸ್ಯರಿದ್ದರೂ ಕೊಯಮತ್ತೂರಿನಲ್ಲಿ ವಾರ್ಡ್ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದ ಅವರು ಒಂದೇ ಒಂದು ಮತವನ್ನು ಪಡೆದರು!. ಇದು ಬಿಜೆಪಿಯನ್ನು ತಮಿಳುನಾಡು ಹೇಗೆ ನಿಭಾಯಿಸುತ್ತದೆ ಎನ್ನವುದನ್ನು ತೋರಿಸುತ್ತದೆ'' ಎಂದು ಕಾಂಗ್ರೆಸ್ ನಾಯಕ ಅಶೋಕ್ ಕುಮಾರ್ ಟ್ವೀಟಿಸಿದ್ದಾರೆ.
ಕಾರ್ತಿಕ್ ಅವರು ಚುನಾವಣಾ ಪ್ರಚಾರಕ್ಕಾಗಿ ಬಿಡುಗಡೆ ಮಾಡಿದ ಪೋಸ್ಟರ್ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಅವರನ್ನೂ ಒಳಗೊಂಡಂತೆ ಇತರ ಏಳು ನಾಯಕರ ಭಾವಚಿತ್ರಗಳಿದ್ದವು. ಆದರೆ, ಅವರು ಕೇವಲ ಒಂದು ಮತವನ್ನು ಪಡೆದರು ಎಂದು ಇನ್ನೊಬ್ಬ ಟ್ವಿಟರ್ ಬಳಕೆದಾರರು ಟ್ವೀಟಿಸಿದ್ದಾರೆ.
'ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್'ನೊಂದಿಗೆ ಮಾತನಾಡಿದ ಕೇವಲ ಒಂದು ಮತವನ್ನು ಪಡೆದ ಡಿ.ಕಾರ್ತಿಕ್ "ನಾನು ಬಿಜೆಪಿ ಪರವಾಗಿ ಸ್ಪರ್ಧಿಸಿರಲಿಲ್ಲ. ಕಾರಿನ ಚಿಹ್ನೆಯ ಮೇಲೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ. ನನ್ನ ಕುಟುಂಬವು ನಾಲ್ಕು ಮತಗಳನ್ನು ಹೊಂದಿದೆ ಹಾಗೂ ಎಲ್ಲಾ ಮತಗಳು ಪಂಚಾಯಿತಿಯ 4 ನೇ ವಾರ್ಡ್ನಲ್ಲಿವೆ. ನಾನು ಸ್ಪರ್ಧಿಸಿದ್ದ 9ನೇ ವಾರ್ಡ್ನಲ್ಲಿ ನನ್ನ ನಾಲ್ವರು ಕುಟುಂಬ ಸದಸ್ಯರು ಹಾಗೂ ನನಗೆ ಮತವಿಲ್ಲ. ನಾನು ಬಿಜೆಪಿ ಪರವಾಗಿ ಸ್ಪರ್ಧಿಸಿದ್ದು, ನನ್ನ ಕುಟುಂಬದವರ ಮತವನ್ನು ಪಡೆದಿಲ್ಲ ಎಂದು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಇದು ನಿಜವಲ್ಲ'' ಎಂದರು.