ಉತ್ತಮ ಜೀವನ ಶೈಲಿಗೆ ವ್ಯಾಯಾಮ ಅತ್ಯಗತ್ಯ: ಪ್ರೊ.ರಾಮದಾಸ್

ಉಡುಪಿ, ಅ.12: ಅಸಾಂಕ್ರಾಮಿಕ ರೋಗಗಳು ಮನುಷ್ಯನ ಜೀವನದಲ್ಲಿ ಪರಿಣಾಮಕಾರಿಯಾಗಿ ಕಾಡುತ್ತಿದ್ದು, ಇಂತಹ ರೋಗಗಳು ಬಾರದಂತೆ ಎಚ್ಚರ ವಹಿಸಬೇಕು. ನಮ್ಮ ಪ್ರತಿನಿತ್ಯದ ಜೀವನ ಶೈಲಿಯಲ್ಲಿ ಸಂತೋಷಭರಿತ ಮಾನಸಿಕ ಸದೃಢತೆ ಕಾಪಾಡಿಕೊಳ್ಳಲು ವ್ಯಾಯಾಮ ಮಾಡುವುದರಿಂದ ಉತ್ತಮ ಆರೋಗ್ಯವನ್ನು ವೃದ್ದಿಸಿಕೊಳ್ಳಬಹುದು ಎಂದು ಪ್ರೊ. ರಾಮದಾಸ್ ಮೇಜರ್ ಹೇಳಿದ್ದಾರೆ.
ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ಉಡುಪಿ, ಜಿಲ್ಲಾ ಸರ್ವೇಕ್ಷಣಾ ಘಟಕ (ಎನ್‌ಸಿಡಿ ಘಟಕ ಉಡುಪಿ) ಇವರ ಸಹಯೋಗದೊಂದಿಗೆ ವಿಶ್ವ ಹೃದಯ ದಿನಾಚರಣೆ ಹಾಗೂ ಫಿಟ್ ಇಂಡಿಯಾ ಫ್ರೀಡಮ್ ರನ್ 2.0 ಕಾರ್ಯಕ್ರಮದಲ್ಲಿ ಭಾಗ ವಹಿಸಿ ಅವರು ಮಾತನಾಡುತಿದ್ದರು.
ಹೃದಯಕ್ಕೆ ಸಂಬಂಧಿಸಿದಂತೆ ವಿನೂತನ ರೀತಿಯಲ್ಲಿ ಎಲ್ಲರಿಗೂ ವ್ಯಾಯಾಮ ಮಾಡಿಸುವುದರ ಮೂಲಕ ಅವರು ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು. ನಮ್ಮ ಜೀವನ ಶೈಲಿಯಲ್ಲಿ ಶಿಸ್ತುಬದ್ದವಾದ ಆಹಾರ ಕ್ರಮಗಳು ಹಾಗೂ ವ್ಯಾಯಾಮ ಗಳನ್ನು ಮಾಡುವುದರಿಂದ, ಒತ್ತಡ ರಹಿತವಾದ ಜೀವನ ನಡೆಸುವುದರಿಂದ ಹೃದಯ ಆರೋಗ್ಯಪೂರ್ಣವಾಗಿರುತ್ತದೆ ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ವೈದ್ಯಕೀಯ ತಜ್ಞೆ ಡಾ. ದಯಮಣಿ ಮೂಲಭೂತ ಜೀವನ ಬೆಂಬಲ ಕುರಿತು ಆಸ್ಪತ್ರೆಯ ಸಿಬ್ಬಂದಿಗಳಿಗೆ ಹಾಗೂ ನಸಿರ್ಂಗ್ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿದರು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಮಧುಸೂಧನ್ ನಾಯಕ್, ಮಾನಸಿಕ ತಜ್ಞ ಡಾ.ವಾಸುದೇವ್, ಪೆಥಾಲಜಿಸ್ಟ್ ಡಾ.ವೀಣಾ ಕುಮಾರಿ, ಮಕ್ಕಳ ತಜ್ಞ ಡಾ. ವೇಣುಗೋಪಾಲ್, ಚರ್ಮರೋಗ ತಜ್ಞ ಡಾ. ಸುಭಾಶ್ ಕಿಣಿ, ದಂತ ತಜ್ಞ ಡಾ. ಮಂಜುನಾಥ್ ಹಾಗೂ ವೈದ್ಯಕೀಯ ತಜ್ಞ ಡಾ. ನಾಗರಾಜ್ ಮತ್ತು ಇತರರು ಉಪಸ್ಥಿತರಿದ್ದರು.







