ಕಾಪು : ಮುಸ್ಲಿಮ್ ಒಕ್ಕೂಟದಿಂದ ತಾಲೂಕು ಮಟ್ಟದ ಸಮಾವೇಶ

ಕಾಪು : ಸಂಘಟನಾತ್ಮಕವಾಗಿ ತಮ್ಮಲ್ಲಿರುವ ಯಾವುದೇ ಭಿನ್ನಾಭಿಪ್ರಾಯಗಳನ್ನು ಸೌಹಾರ್ದಯುತವಾಗಿ ಪರಿಹರಿಸಿ ಸಮು ದಾಯಕ್ಕೆ ಸೇವೆ ನೀಡುವುದರಿಂದ ಸುಂದರ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕನ್ನಂಗಾರ್ ಜುಮ್ಮಕಾ ಮಸೀದಿಯ ಆಡಳಿತಾಧಿಕಾರಿ ಕೆ.ಎಂ.ಕೆ ಮಂಜನಾಡಿ ಅಭಿಪ್ರಾಯಪಟ್ಟರು.
ಅವರು ಕಾಪುವಿನ ಜೆಸಿಐ ಭವನದಲ್ಲಿ ಮಂಗಳವಾರ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಕಾಪು ತಾಲ್ಲೂಕು ಸಮಿತಿಯ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಸಮುದಾಯದ ಪ್ರಮುಖರ ವಿಶೇಷ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಐಕ್ಯತೆ, ಏಕತೆಗೆ ಧಕ್ಕೆ ಉಂಟಾಗದಂತೆ ಸಂಘಟನಾತ್ಮಕವಾಗಿ ಮುಸ್ಲಿಮ್ ಸಮುದಾಯ ಕೆಲಸ ಮಾಡಬೇಕಾಗಿದ್ದು, ಈ ನಿಟ್ಟಿನಲ್ಲಿ ಮುಸ್ಲಿಮ್ ಒಕ್ಕೂಟದ ಕಾರ್ಯಕ್ರಮಗಳು ಪ್ರಶಂಸನಾರ್ಹವಾಗಿದೆ ಎಂದರು.
ದೇಶದ ಪ್ರಸಕ್ತ ವಿದ್ಯಮಾನದಲ್ಲಿ ಉಡುಪಿ ಜಿಲ್ಲಾ ಮುಸ್ಲಿಕ್ ಒಕ್ಕೂಟದ ನಿಲುವು ಮತ್ತು ಯೋಜನೆಗಳ ಬಗ್ಗೆ ಒಕ್ಕೂಟದ ಮಾಜಿ ಜಿಲ್ಲಾಧ್ಯಕ್ಷ ಯಾಸೀನ್ ಮಲ್ಪೆ ವಿಷಯ ಮಂಡಿಸಿ, ಮುಸ್ಲಿಮ್ ಸಮುದಾಯವು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಬಲಾಢ್ಯರಾಗ ಬೇಕಾಗಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಂದ ಜಮಾಅತ್ ಸಮಿತಿಗಳು ಕಾರ್ಯಪ್ರವೃತ್ತರಾಬೇಕಾಗಿದೆ ಎಂದು ಹೇಳಿದರು.
ಕಾಪು ಖಾಝಿ ಪಿ.ಬಿ. ಅಹಮದ್ ಮುಸ್ಲಿಯಾರ್ ದುವಾ ನೆರವೇರಿಸಿದರು. ಮುಸ್ಲಿಮ್ ಒಕ್ಕೂಟದ ಕಾಪು ತಾಲ್ಲೂಕು ಘಟಕ ಅಧ್ಯಕ್ಷ ಶಬೀಹ್ ಅಹಮದ್ ಖಾಝಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾಧ್ಯಕ್ಷ ಇಬ್ರಾಹಿಮ್ ಸಾಹೇಬ್ ಕೋಟ ವಿಷಯ ಪ್ರಸ್ತಾವಿಸಿದರು. ಮಾಜಿ ಜಿಲ್ಲಾಧ್ಯಕ್ಷ ಎಂ.ಪಿ. ಮೊಯಿದಿನಬ್ಬ ವಕ್ಫ್ ಮಂಡಳಿಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಉಪಾಧ್ಯಕ್ಷ ಅನ್ವರ್ ಆಲಿ ಕಾಪು ಸನ್ಮಾನ ಪತ್ರ ವಾಚಿಸಿದರು.
ಕಾರ್ಯಕ್ರಮದಲ್ಲಿ ಹೃದಯ ತಜ್ಞ ಡಾ. ಅಬ್ದುಲ್ ರಝಾಕ್ ಅವರನ್ನು ಸನ್ಮಾನಿಸಲಾಯಿತು. ಕಾಪು ಖಾಝಿ ಪಿ.ಬಿ. ಅಹಮದ್ ಮುಸ್ಲಿಯಾರ್ ಅವರನ್ನು ಅಭಿನಂದಿಸಲಾಯಿತು. ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೌಲ, ಒಕ್ಕೂಟದ ಜಿಲ್ಲಾ ಹಿರಿಯ ಉಪಾಧ್ಯಕ್ಷ ಖತೀಬ್ ಅಬ್ದುಲ್ ರಶೀದ್, ಒಕ್ಕೂಟದ ಕಾಪು ಉಸ್ತುವಾರಿ ಮನ್ಸೂರ್ ಇಬ್ರಾಹಿಮ್, ಹಾಜಿ ಕೆ. ಅಬೂಬಕ್ಕರ್ ಪರ್ಕಳ, ಮಜೂರು ಬದ್ರಿಯಾ ಜುಮ್ಮಾ ಮಸೀದಿಯ ಖತೀಬ್ ಅಬ್ದುಲ್ ರಶೀದ್ ಅಲ್ ಕಾಮಿಲ್ ಉಪಸ್ಥಿತರಿದ್ದರು.
ತಾಲ್ಲೂಕು ಅಧ್ಯಕ್ಷ ಶಬೀಹ್ ಅಹ್ಮದ್ ಖಾಝಿ ಸ್ವಾಗತಿಸಿದರು. ಕಾರ್ಯದರ್ಶಿ ರಿಯಾಝ್ ನಝೀರ್ ಮುದರಂಗಡಿ ವಂದಿಸಿದರು. ಅಬ್ದುಲ್ ಹಮೀದ್ ಪಡುಬಿದ್ರಿ ವಂದಿಸಿದರು.







