ಲಖಿಂಪುರ ಖೇರಿ ಹಿಂಸಾಚಾರ ಮೃತಪಟ್ಟವರಿಗೆ ಸಾವಿರಾರು ರೈತರು, ಪ್ರತಿಪಕ್ಷಗಳ ನಾಯಕರಿಂದ ಶ್ರದ್ಧಾಂಜಲಿ
ಲಕ್ನೋ (ಉತ್ತರಪ್ರದೇಶ), ಅ. 12: ಕೇಂದ್ರ ಸರಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಅಕ್ಟೋಬರ್ 3ರಂದು ನಡೆದ ಪ್ರತಿಭಟನೆ ಸಂದರ್ಭ ಸಂಭವಿಸಿದ ಹಿಂಸಾಚಾರದಲ್ಲಿ ಮೃತಪಟ್ಟವರಿಗೆ ಸಾವಿರಾರು ರೈತರು ಹಾಗೂ ಪ್ರತಿಪಕ್ಷದ ನಾಯಕರು ಮಂಗಳವಾರ ಟಿಕೋನಿಯಾ ಗ್ರಾಮದ ಸೇರಿ ಶ್ರದ್ಧಾಂಜಲಿ ಸಲ್ಲಿಸಿದರು.
ಲಖಿಂಪುರ ಖೇರಿ ಜಿಲ್ಲೆಯಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ 8 ಮಂದಿ ಮೃತಪಟ್ಟಿದ್ದರು. ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಬೆಂಗಾವಲು ವಾಹನಗಳ ಭಾಗವಾಗಿದ್ದ ವಾಹನಗಳು ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಹರಿಸಲಾಗಿದೆ ಎಂದು ರೈತರು ಆರೋಪಿಸಿದ್ದರು. ಡಿಕ್ಕಿ ಹೊಡೆದ ವಾಹನ ಆಜಯ್ ಮಿಶ್ರಾ ಅವರ ಪುತ್ರ ಆಶೀಷ್ ಮಿಶ್ರಾ ಅವರಿಗೆ ಸೇರಿದ್ದು ಎಂದು ಕೂಡ ರೈತರು ಆರೋಪಿದ್ದರು.
ಹಿಂಸಾಚಾರದಲ್ಲಿ ಮೃತಪಟ್ಟ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಗಣ್ಯರಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಭಾರತೀಯ ಕಿಸಾನ್ ಒಕ್ಕೂಟದ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಹಾಗೂ ಸಮಾಜವಾದಿ ಪಕ್ಷದ ಜಿಲ್ಲಾ ವರಿಷ್ಠ ರಾಮ್‌ಪಾಲ್ ಸಿಂಗ್ ಯಾದವ್ ಮೊದಲಾದವರು ಇದ್ದರು.
‘‘ಮೋದಿ ಸರಕಾರದ ಭಾಗವಾಗಿರುವ ಅಜಯ್ ಮಿಶ್ರಾ ಅವನ್ನು ವಜಾಗೊಳಿಸದೇ ಇರುವುದು ಅವಮಾನಕರ. ಅಮಾಯಕ ಜನರನ್ನು ಕೊಂದ ವಾಹನಗಳಲ್ಲಿ ಅವರ ವಾಹನಗಳು ಕೂಡ ಇದ್ದವು’’ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ.