ಹನೂರು; ಕಲ್ಲುಬಂಡೆಗಳನ್ನು ಹೊಡೆಯುವ ಸ್ಪೋಟಕಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ

ಹನೂರು: ಕಲ್ಲುಬಂಡೆಗಳನ್ನು ಹೊಡೆಯುವ ಸ್ಪೋಟಕಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿ ಸ್ಪೋಟಕಗಳನ್ನು ವಶಪಡಿಸಿಕೊಳ್ಳುವಲ್ಲಿ ರಾಮಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಯು ಕೌದಳ್ಳಿ ಮಾರ್ಗವಾಗಿ ಪೂಜಾರಿ ಬೋವಿ ದೊಡ್ಡಿ ಗ್ರಾಮದತ್ತ ತೆರಳುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನಾಧರಿಸಿ ರಾಮಾಪುರ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಮಂಜುನಾಥ್ ಪ್ರಸಾದ್ ನೇತೃತ್ವದ ಪೊಲೀಸ್ ತಂಡ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದೆ.
ಬಂಧಿತ ವ್ಯಕ್ತಿಯನ್ನು ಹನೂರು ತಾಲೂಕಿನ ರಾಮಾಪುರ ಸಮೀಪದ ಪೂಜಾರಿ ಬೋವಿ ದೊಡ್ಡಿ ಗ್ರಾಮದ ರಂಗಸ್ವಾಮಿ(40) ಎಂದು ತಿಳಿದು ಬಂದಿದೆ. ಬಂಧಿತನಿಂದ ಕಲ್ಲುಬಂಡೆ ಹೊಡೆಯುವ 2 ಇಂಚು ಉದ್ದದ 32 ಕೇಪು, 16 ತೋಪುಗಳು, 250 ಗ್ರಾಂ. ತೂಕವಿರುವ ಎರಡು ಬೈಡಿಂಗ್ ವೈರ್, ಒಂದು ಪ್ಲಾಸ್ಟಿಕ್ ಚೀಲ, ಮರದ ಪಟ್ಟಿಯಿಂದ ನಿರ್ಮಿಸಿರುವ ಒಂದು ಸ್ಪೋಟ ಮಾಡುವ ಮೆಗ್ಗರ್ ಅನ್ನು ವಶಪಡಿಸಿಕೊಂಡು ಮೊಕದ್ದಮೆ ಸಂಖ್ಯೆ 129/21, ಕಲಂ 9(ಬಿ) 1(ಬಿ) ಸ್ಪೋಟಕ ಅಧಿ ನಿಯಮ ಕಾಯ್ದೆ 1884 ರ ಪ್ರಕಾರ ಕಾನೂನಿನ ಕ್ರಮವನ್ನು ಕೈಗೊಳ್ಳಲಾಗಿದೆ.
ದಾಳಿಯಲ್ಲಿ ರಾಮಾಪುರ ಸಬ್ ಇನ್ಸ್‍ಪೆಕ್ಟರ್ ಮಂಜುನಾಥ್ ಪ್ರಸಾದ್, ಹೆಡ್ ಕಾನ್ಸ್‍ಟೆಬಲ್ ಎಸ್.ಎಲ್.ಲಿಂಗರಾಜು, ಕಾನ್ಸ್‍ಟೆಬಲ್‍ಗಳಾದ ಮನೋಹರ, ರಮೇಶ್ ಇದ್ದರು.





