ಧ್ಯಾನ, ಜ್ಞಾನದ ಅರಿವಿನಿಂದ ಪೂರ್ಣಪ್ರಜ್ಞರಾಗಿ: ಸಿಎಂ ಬೊಮ್ಮಾಯಿ

ಅದಮಾರು, ಅ.13: ಧ್ಯಾನ ಮತ್ತು ಜ್ಞಾನದ ಅರಿವಿನ ಪೂರ್ಣಪ್ರಜ್ಞರಾಗಿ ವಿದ್ಯಾರ್ಥಿಗಳು ಜಗತ್ತು ಗೆಲ್ಲುವ ಸಾಧಕರಾಗಬೇಕು ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಪಡುಬಿದ್ರಿ ಸಮೀಪದ ಅದಮಾರಿನಲ್ಲಿ ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ವತಿಯಿಂದ ಅದಮಾರು ಪೂರ್ಣಪ್ರಜ್ಞ ಪದವಿ ಕಾಲೇಜಿಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ವಾಸುದೇವ ಸಭಾಭವನದಲ್ಲಿ ನಡೆದ ಸಭಾ ಕಾಯರ್ಕ್ರಮದಲ್ಲಿ ಮಾತನಾಡುತಿದ್ದರು.
ಪ್ರಜ್ಞಾಶೀಲರಾಗಿರುವುದೇ ಬದುಕಿನ ಬಹುದೊಡ್ಡ ಸಾಧನೆ. ಯಾವುದೇ ಕೆಲಸ ಕಾರ್ಯಗಳಲ್ಲಿ ನಾವು ಪ್ರಜ್ಞಾಪೂರ್ವಕವಾಗಿ ನಮ್ಮನ್ನು ತೊಡಗಿಸಿಕೊಳ್ಳಬೇಕು. ಅದೃಷ್ಟ ಒಲಿದಾಗ ಕರ್ತವ್ಯವನ್ನು ಮರೆಯಬಾರದು. ಪರಿಪೂರ್ಣ ಜ್ಞಾನ ಸಂಪಾದನೆಯನ್ನು ಶೃದ್ದೆಯಿಂದಲೇ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅದಮಾರು ಮಠದ ಹಿರಿಯ ಯತಿಗಳಾದ ಶ್ರೀ ವಿಬುದೇಶತೀರ್ಥರು ಪ್ರಾರಂಭಿಸಿದ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳು ಇಂದು ಪೂರ್ಣಪ್ರಜ್ಞ ಬ್ರಾಂಡ್ ಆಗಿ ಜನಪ್ರಿಯವಾಗಿದೆ. ಇದು ವಿದ್ಯಾರ್ಥಿ ಶಕ್ತಿ, ನೈತಿಕ ಶಕ್ತಿಯಿಂದ ರೂಪುಗೊಂಡಿದೆ. ಶಿಕ್ಷಣ ಸಂಸ್ಥೆಯಲ್ಲಿ ಪಾಠ, ಓದು, ಪರೀಕ್ಷೆಯಿದ್ದರೆ ಬದುಕಿನಲ್ಲಿ ಪರೀಕ್ಷೆ ಎದುರಿಸಿ ಪಾಠ ಕಲಿಯಬೇಕಿದೆ. ಒಮ್ಮೆ ವಿದ್ಯಾರ್ಥಿಯಾದವ ಕೊನೆಯುಸಿರು ಇರುವವರೆಗೂ ವಿದ್ಯಾರ್ಥಿಯಾಗಿಯೇ ಇರುತ್ತಾನೆ ಎಂದು ಬೊಮ್ಮಾಯಿ ನುಡಿದರು.
ಉಡುಪಿ ಅದಮಾರು ಮಠ ಶಿಕ್ಷಣ ಮಂಡಳಿಯ ಅಧ್ಯಕ್ಷ ಹಾಗೂ ಅದಮಾರು ಹಿರಿಯ ಯತಿಗಳಾದ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸಿ ಅನುಗ್ರಹ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ವಿ.ಸುನಿಲ್ ಕುಮಾರ್, ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಉಡುಪಿ ಶಾಸಕ ಕೆ.ರಘುಪತಿ ಭಟ್ , ಗ್ರಾಪಂ ಅಧ್ಯಕ್ಷೆ ಕಸ್ತೂರಿ ಪ್ರವೀಣ್, ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ಜಿ.ಎಸ್. ಚಂದ್ರಶೇಖರ್ ಉಪಸ್ಥಿತರಿದ್ದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರದೀಪ್‌ಕುಮಾರ್ ಅತಿಥಿಗಳನ್ನು ಸ್ವಾಗತಿಸಿದರೆ, ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ.ಜಯಶಂಕರ ಕಂಗಣ್ಣಾರು ಕಾರ್ಯಕ್ರಮ ನಿರೂಪಿಸಿ, ಸಂಸ್ಥೆಯ ಕೋಶಾಧಿಕಾರಿ ಪ್ರವೀಣ್‌ಕುಮಾರ್ ವಂದಿಸಿದರು.








