ಮುಖ್ಯಮಂತ್ರಿಗಳಿಂದ ಪೂರ್ಣಪ್ರಜ್ಞ ವಿಜ್ಞಾನ ಸಮುಚ್ಛಯಕ್ಕೆ ಶಿಲಾನ್ಯಾಸ

ಉಡುಪಿ, ಅ.13: ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಉಡುಪಿಯಲ್ಲಿ ಪೂರ್ಣಪ್ರಜ್ಞ ಕಾಲೇಜಿನ ನೂತನ ವಿಜ್ಞಾನ ಸಮುಚ್ಛಯಕ್ಕೆ ಶಿಲಾನ್ಯಾಸ ನೆರವೇರಿಸಿದರಲ್ಲದೇ, ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ನೂತನ ಗಣಕ ವಿಜ್ಞಾನ ಪ್ರಯೋಗಾಲಯವನ್ನು ಉದ್ಘಾಟಿಸಿದರು.
ಇಂದಿನ ಕಂಪ್ಯೂಟರ್ ಹಾಗೂ ಡಿಜಿಟಲ್ ಯುಗ ಬದುಕಿನ ದೃಷ್ಟಿಕೋನ ವನ್ನೇ ಬದಲಾವಣೆ ಮಾಡಿಬಿಟ್ಟಿದೆ. ಇದರಿಂದ ಇಂದು ಕ್ಲಾಸ್‌ರೂಮ್ ವರ್ಸಸ್ ಮೊಬೈಲ್ ಆ್ಯಪ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ತಂತ್ರಜ್ಞಾನ ಮಾನವನನ್ನು ಹಿಂದಿಕ್ಕಿ ಮುಂದೆ ಸಾಗುತ್ತಿದೆ. ಈ ಬದಲಾವಣೆಗೆ ನಾವು ಹೊಂದಿಕೊಳ್ಳಲೇ ಬೇಕಾಗಿದೆ ಎಂದು ಸಿಎಂ ಬೊಮ್ಮಾಯಿ ನುಡಿದರು.
21ನೇ ಶತಮಾನಕ್ಕೆ ನಮ್ಮ ಮಕ್ಕಳನ್ನು ತಯಾರಿ ಮಾಡಲು ರಾಜ್ಯದಲ್ಲಿ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ಬಯಸಿದ ವಿಷಯದಲ್ಲಿ ಹೆಚ್ಚಿನ ಜ್ಞಾನ, ಪರಿಣಿತಿಯನ್ನು ಪಡೆಯಲು ಸಾಧ್ಯವಾಗಲಿದೆ. ಕಲಿಕೆಗೂ ಮುಕ್ತ ಪ್ರವೇಶ ಮತ್ತು ನಿರ್ಗಮನ ಪಾಲಿಸಿಯನ್ನು ತರಲಾಗಿದೆ ಎಂದರು.
ಇದೀಗ ಜಾರಿಗೆ ಬಂದಿರುವ ಹೊಸ ಶಿಕ್ಷಣ ನೀತಿಯ ಸಮರ್ಪಕ ಅನುಷ್ಠಾನದಿಂದ ಮಕ್ಕಳು ಅಂತಾರಾಷ್ಟ್ರೀಯ ಸ್ಪರ್ಧೆಗೆ ಸಿದ್ಧರಾಗುತ್ತಾರೆ. ಸುಶಿಕ್ಷಿತ ಭಾರತ ಕಟ್ಟುವುದೇ ಇದರ ಹಿಂದಿರುವ ಉದ್ದೇಶವಾಗಿದೆ ಎಂದು ಬಸವರಾಜ ಬೊಮ್ಮಾಯಿ ನುಡಿದರು.
ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್, ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಡುಪಿ ಶಾಸಕ ಕೆ. ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಹಾಗೂ ನ್ಯಾಯವಾದಿ ಪ್ರದೀಪ್‌ಕುಮಾರ್ ಉಪಸ್ಥಿತರಿದ್ದರು.
ಪೂರ್ಣಪ್ರಜ್ಞ ಕಾಲೇಜು ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ. ಜಿ.ಎಸ್.ಚಂದ್ರಶೇಖರ್ ಸ್ವಾಗತಿಸಿದರೆ, ಉಪನ್ಯಾಸಕ ರಮಾನಂದ ರಾವ್ ಕಾರ್ಯಕ್ರಮ ನಿರೂಪಿಸಿದರು. ಪೂರ್ಣಪ್ರಜ್ಞ ಕಾಲೇಜು ಪ್ರಾಂಶುಪಾಲ ಡಾ. ರಾಘವೇಂದ್ರ ಎ. ವಂದಿಸಿದರು.









