ಮಂತ್ರಿ ಸ್ಥಾನ ನೀಡಿ ಎಂದು ವಿಜಯೇಂದ್ರ, ಬಿಎಸ್ ವೈ ಕೇಳಿದ್ರಾ?: ಸಚಿವ ಈಶ್ವರಪ್ಪ

ಶಿವಮೊಗ್ಗ, ಅ.13:ವಿಜಯೇಂದ್ರಗೆ ಮಂತ್ರಿ ಸ್ಥಾನ ನೀಡುವ ವಿಚಾರದಲ್ಲಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿಗೆ ಸಚಿವ ಈಶ್ವರಪ್ಪ ಗರಂ ಆಗಿದ್ದಾರೆ.
ವಿಜಯೇಂದ್ರನಿಗೆ ಸಂಪುಟದಲ್ಲಿ ಸ್ಥಾನಮಾನ ನೀಡುವ ವಿಚಾರವಾಗಿ ಶಿವಮೊಗ್ಗದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲಾ ಊಹಾತೀತವಾಗಿ ಸುದ್ದಿ ಮಾಡುವವರು ನೀವು,ನಂತರ ವಿಜಯೇಂದ್ರಗೆ ಮಂತ್ರಿ ಸ್ಥಾನ ನೀಡ್ತಿರೋ ಇಲ್ವೋ ಅಂತಾ ನಮಗೆ ಪ್ರಶ್ನೆ ಕೇಳಿದ್ರೆ ನಾನೇಂತ ಉತ್ತರ ನೀಡಬೇಕು ನಿಮಗೆ. ಮುಖ್ಯವಾಗಿ ವಿಜಯೇಂದ್ರರಾಗಲಿ, ಯಡಿಯೂರಪ್ಪನವರಾಗಲಿಮಂತ್ರಿ ಸ್ಥಾನ ಬೇಕು ಅಂತಾ ಯಾರ ಬಳಿ ಕೇಳಿದ್ದಾರೆ ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಶಿರಾಳಕೊಪ್ಪದಲ್ಲಿ ಅನ್ಯಕೋಮಿನ ಯುವಕರು ಹಿಂದು ಯುವಕನ ಮೇಲೆ ನಡೆಸಿದ ಹಲ್ಲೆ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಕೆಲವು ಅನ್ಯಕೋಮಿನವರು ಬಹಳ ತಲೆಹರಟೆಗಳಾಗಿದ್ದು,ಅವರೇ ಮುಸ್ಲಿಂರ ಉದ್ದಾರಕರು ಅನ್ನೋ ರೀತಿ ವರ್ತಿಸುತ್ತಿದ್ದಾರೆ. ಇದು ಸರಿಯಲ್ಲ ಎಂದು ಹೇಳಿದ್ದಾರೆ.
ಚೈತ್ರಾ ಕುಂದಾಪುರ ಅವರ ಹೇಳಿಕೆಯನ್ನು ಕೇವಲ ಮೊಬೈಲ್ ಸ್ಟೇಟಸ್ ನಲ್ಲಿ ಹಾಕಿಕೊಂಡಿದ್ದಕ್ಕೆ ಅಂಗಡಿಗೆ ನುಗ್ಗಿ ಹೊಡೆಯುತ್ತಾರೆ ಎಂದರೆ ಅವರಿಗೆ ಎಷ್ಟು ಸೊಕ್ಕು ಇರಬೇಕು. ಈ ವ್ಯವಸ್ಥೆ ರಾಜ್ಯದಲ್ಲಾಗಲಿ ದೇಶದಲ್ಲಾಗಲಿ ನಡೆಯಲು ಬಿಡೋದಿಲ್ಲ. ಹಿಂದುತ್ವದ ಸುದ್ದಿಗೆ ಬಂದರೆ ಭಾರಿ ಅನುಭವಿಸುತ್ತೀರಿ ಎಂದುಎಚ್ಚರಿಕೆ ನೀಡಿದ್ದಾರೆ.
ಸಿದ್ದರಾಮಯ್ಯ ಜೊತೆ ಬಹಿರಂಗ ಚರ್ಚೆಗೆ ಸಿದ್ದ:
ಕುರುಬ ಸಮುದಾವನ್ನು ಎಸ್ಟಿ ಮೀಸಲಾತಿ ಗೆ ಸೇರಿಸುವ ವಿಚಾರದಲ್ಲಿ ಸಿದ್ದರಾಮಯ್ಯ ವಿರೋಧ ಮಾಡಿದ್ದಾರೆಂದು ನಾನೆಲ್ಲೂ ಹೇಳಿಕೆ ನೀಡಿಲ್ಲ. ಅವರು ಯಾಕೆ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೋ ಗೊತ್ತಿಲ್ಲ. ಅವರು ಏನು ಹೇಳಿಕೆ ನೀಡಿದ್ದಾರೆ ಅದನ್ನು ತಿಳಿದುಕೊಂಡು ಉತ್ತರಿಸುವೆ ಎಂದರು.
ಕಾಗಿನೆಲೆ ಶ್ರೀ ಗಳ ನೇತೃತ್ವದಲ್ಲಿ ಮೀಸಲಾತಿ ಹೋರಾಟ ನಡೆದಿದೆ.ಆ ಹೋರಾಟಕ್ಕೆ ನಾನು ಕೈಜೋಡಿಸಿದ್ದೆ.ನಾನು ಯಾವುದೇ ಚರ್ಚೆಗೂ ಸಿದ್ಧ. ಸಿದ್ಧರಾಮಯ್ಯವಲ್ಲದೆ ಮಾತ್ರವಲ್ಲ, ಬೇರೆ ಯಾರ ಜೊತೆ ಆದರ್ರೂ ನಾನು ಬಹಿರಂಗ ಚರ್ಚೆ ಗೆ ಸಿದ್ಧ ಎಂದು ಹೇಳಿದರು.
ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ:
ಸಿದ್ದರಾಮಯ್ಯ ರಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಎಂಬ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಈಶ್ವರಪ್ಪ, ಸಿದ್ಧು ಬಿಎ ಸ್ ವೈ ಭೇಟಿ ವಿಚಾರ,ಈ ಹಿನ್ನೆಲೆಯಲ್ಲಿ ಐಟಿ ರೇಡ್ ಈ ಎಲ್ಲ ಸಂಗತಿ ಗಳ ಕುರಿತು ದಾಖಲೆ ಇದ್ಧರೆ ಬಹಿರಂಗ ಪಡಿಸಬೇಕು.ಮಾಜಿ ಸಿಎಂ ಆಗಿ ವಿಪಕ್ಷ ಸ್ಥಾನದ ಕುರಿತು ಕೀಳು ಮಟ್ಟದ ಹೇಳಿಕೆ ಸೂಕ್ತ ವಲ್ಲ.ರಾಜ್ಯದಲ್ಲಿ ಜೆಡಿಎಸ್ ಪಕ್ಷ ಬದುಕಿದೆ ಎನ್ನುವುದನ್ನು ತೋರಿಸಲು ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪರಿಸ್ಥಿತಿ ಹಾಸ್ಯಾಸ್ಪದ
ಡಿಕೆಶಿ ಡೀಲ್ ಬಗ್ಗೆ ಉಗ್ರಪ್ಪ, ಸಲೀಂ ಮಾತುಕತೆ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು,ರಾಜ್ಯದಲ್ಲಿ ಕೂಡಾ ಕಾಂಗ್ರೆಸ್ ಪರಿಸ್ಥಿತಿ ಹಾಸ್ಯಾಸ್ಪದದ ರೀತಿ ಆಗಿದೆ. ಉಗ್ರಪ್ಪ ಮತ್ತು ಸಲೀಂ ಅವರು ಡಿಕೆಶಿ ಬಗ್ಗೆ ಏನೇನು ಮಾತನಾಡಿದ್ದಾರೆ ಎಂಬುದನ್ನು ಟಿವಿಗಳಲ್ಲಿ ನೋಡಿದೆ. ನಾನು ಆ ಪದಗಳನ್ನು ಬಳಸಲು ಹೋಗುವುದಿಲ್ಲ. ಕಾಂಗ್ರೆಸ್ ನವರ ಪರಿಸ್ಥಿತಿ ಅದೇ ರೀತಿ ಇದೆ. ಡಿಕೆಶಿ ಬೆಂಬಲಿಗರು ಸಿದ್ದರಾಮಯ್ಯ ಅವರ ವಿರುದ್ದ ಅದಕ್ಕಿಂತ ಜಾಸ್ತಿ ಹೇಳುತ್ತಿದ್ದಾರೆ ಎಂದರು.
ಕಾಂಗ್ರೆಸ್ ನವರು ಕುಡುಕರು, ಕುಡಿದು ಮಾತನಾಡ್ತಾರೆ, ಅವರ ಬಾಯಿ ತೊದಲಿಸುತ್ತದೆ. ಈ ರೀತಿ ಪದಗಳನ್ನು ಯಾರೋ ಹೊರಗಡೆಯವರು ಹೇಳುತ್ತಿಲ್ಲ. ಕಾಂಗ್ರೆಸ್ ನವರೇ ಹೇಳುತ್ತಿದ್ದಾರೆ. ಸಿದ್ದರಾಮಯ್ಯ ವಿರುದ್ದ ಡಿಕೆಶಿ ಗುಂಪು, ಡಿಕೆಶಿ ವಿರುದ್ದ ಸಿದ್ದರಾಮಯ್ಯ ಗುಂಪು ಆರೋಪ ಮಾಡ್ತಿದೆ. ಇದು ಒಳಗೊಳಗೆ ನಡೆಯುತಿತ್ತು. ಇಂದು ಬಹಿರಂಗವಾಗಿದೆ ಎಂದ ಅವರು, ಬರುವ ವಿಧಾನ ಸಭಾ ಚುನಾವಣೆಯೊಳಗೆ ಕಾಂಗ್ರೆಸ್ ಎರಡು ಗುಂಪು ಆಗುತ್ತದೆ ಎಂದು ಭವಿಷ್ಯ ನುಡಿದರು.
ಅವರ ಪಕ್ಷದ ಆಂತರಿಕ ವಿಚಾರ ನನಗೆ ಗೊತ್ತಾಗಿಯೇ ಇದನ್ನ ಹೇಳಿದ್ದೆ. ಅದಕ್ಕೆ ಬಹಿರಂಗವಾಗಿಯೇ ಸಿಕ್ಕಂತಹ ಸಾಕ್ಷಿ ಇದು. ಕಾಂಗ್ರೆಸ್ ಪಕ್ಷವೇ ಕೆಟ್ಟು ಹೋಗಿದೆ. ಕಾಂಗ್ರೆಸ್ ಪಕ್ಷವೇ ಕೆಟ್ಟ ಪಕ್ಷ ಆಗಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಕಾಂಗ್ರೆಸ್ ಪಕ್ಷ ಇವತ್ತು ಇಲ್ಲ. ಇವರನ್ನ ಏನಂತ ನಾಯಕರು ಅಂತಾ ಒಪ್ಪಿಕೊಳ್ಳಬೇಕು ಸಿದ್ದರಾಮಯ್ಯ, ಇಬ್ರಾಹಿಂ ಅವರು ಇಂದಿರಾಗಾಂಧಿ ಅವರಿಗೆ ಯಾವ ಭಾಷೆ ಬಳಸುತ್ತಾರೆ ಅಂತಾ ಹೇಳೋಣ ನಾನು. ಗುಂಪುಗಾರಿಕೆ ಇದುವರೆಗೆ ಒಳಗೆ ಕುದಿಯುತಿತ್ತು. ಇಂದು ಅದು ಬಹಿರಂಗವಾಗಿದೆ ಅಷ್ಟೇ. ಒಬ್ಬ ನಾಯಕರು ಇನ್ನೊಬ್ಬ ನಾಯಕರಿಗೆ ಟೀಕೆ ಮಾಡುವ ಸಮಯದಲ್ಲಿ ಈ ರೀತಿ ಪದ ಬಳಸಬೇಡಿ ಎಂದರು.







