ಸತ್ಯ ಮಾತನಾಡಿದವರನ್ನು ಕಾಂಗ್ರೆಸ್‌ನಲ್ಲಿ ಉಚ್ಛಾಟನೆ: ಸಚಿವ ಸುನೀಲ್ ಕುಮಾರ್

ಉಡುಪಿ, ಅ.13: ಡಿಕೆಶಿ ವಿರುದ್ಧ ಕಾಂಗ್ರೆಸ್ ನಾಯಕರ ಕಮಿಷನ್ ಆರೋಪಕ್ಕೆ ಸಂಬಂಧಿಸಿದಂತೆ ಉಚ್ಚಾಟನೆ ಮತ್ತು ಶೋಕಾಸ್ ನೋಟೀಸ್ ನೀಡಿರುವುದು ವಿಷಾದದ ಸಂಗತಿ. ಪಕ್ಷದ ಪ್ರಮುಖರಿಗೆ ಪಕ್ಷದ ನಾಯಕರು ಯಾವ ರೀತಿ ಗೌರವ ಕೊಡುತ್ತಾರೆ ಎಂಬುದು ಗೊತ್ತಾಗಿದೆ. ಸತ್ಯವನ್ನು ಮಾತನಾಡಿದವರಿಗೆ ಕಾಂಗ್ರೆಸ್‌ನಲ್ಲಿ ಈ ಸ್ಥಿತಿ ಬಂದಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಯಾರೂ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಈ ರೀತಿ ನಡೆಸಿಕೊಳ್ಳುತ್ತಿರುವುದು ಕಾಂಗ್ರೆಸ್ ಹಿಂದಿನಿಂದಲೂ ಮಾಡಿಕೊಂಡು ಬಂದಿದೆ. ದಲಿತ ನಾಯಕರ ಮನೆಗೆ ಬೆಂಕಿ ಹಾಕಿದಾಗಲೂ ಕಾಂಗ್ರೆಸ್ ಇದೇ ರೀತಿ ವರ್ತನೆ ಮಾಡಿತ್ತು ಎಂದು ತಿಳಿಸಿದರು.
ಸತ್ಯ ಹೇಳಿದವರನ್ನು ಕಾಂಗ್ರೆಸ್ ಹೇಗೆ ನಡೆಸಿಕೊಳ್ಳುತ್ತದೆ ಎಂಬುದು ಈ ಘಟನೆಯಿಂದ ಗೊತ್ತಾಗಿದೆ. ಈ ಮಾತುಕತೆಯಿಂದ ಕಾಂಗ್ರೆಸ್ ನಾಯಕರು ಎಚ್ಚೆತ್ತುಕೊಳ್ಳಬೇಕಾಗಿತ್ತು. ತಮ್ಮ ನಡವಳಿಕೆಯನ್ನು ತಿದ್ದಿಕೊಳ್ಳಬೇಕಾಗಿತ್ತು. ಈ ರೀತಿ ವರ್ತನೆಯನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ ಎಂದು ಸಚಿವರು ಹೇಳಿದರು.





