ಪರಿಶಿಷ್ಟ ನಿವೇಶನ ರಹಿತರ ನಿರ್ಲಕ್ಷಿಸಿ ಬಲಾಢ್ಯರಿಗೆ ನಿವೇಶನ ಹಂಚಿಕೆಗೆ ಗ್ರಾಪಂ ಹುನ್ನಾರ ಆರೋಪ
ಬಿ.ಹೊಸಳ್ಳಿ ಗ್ರಾಮದ ಪರಿಶಿಷ್ಟರಿಂದ ಅಪರ ಜಿಲ್ಲಾಧಿಕಾರಿಗೆ ದೂರು; ಕ್ರಮಕ್ಕೆ ಆಗ್ರಹ

ಚಿಕ್ಕಮಗಳೂರು, ಅ.13: ಗ್ರಾಮದ ಪರಿಶಿಷ್ಟ ಸಮುದಾಯದ ನಿವೇಶನ ರಹಿತರಿಗೆ ನಿವೇಶನ ಕಲ್ಪಿಸಲು ಗುರುತಿಸಲಾಗಿದ್ದ ಜಾಗವನ್ನು ಬೇರೆ ಗ್ರಾಪಂ ವ್ಯಾಪ್ತಿಯ ಬಲಾಢ್ಯರಿಗೆ ನಿವೇಶನ ನೀಡಲು ಗ್ರಾಪಂ ಅಧ್ಯಕ್ಷರು, ಸದಸ್ಯರು ಹಾಗೂ ಪಿಡಿಒ ಸಂಚು ಮಾಡಿದ್ದಾರೆ. ಸ್ಥಳೀಯ ನಿವೇಶನ ರಹಿತರಿಗಾಗಿ ಮೀಸಲಿಟ್ಟ ಜಾಗದಲ್ಲಿ ಸ್ಥಳೀಯರಿಗೆ ನಿವೇಶನ ಕಲ್ಪಿಸಬೇಕು. ಗ್ರಾಪಂ ಮಾಡಿರುವ ನಿರ್ಣಯವನ್ನು ಕೂಡಲೇ ರದ್ದು ಮಾಡಬೇಕೆಂದು ಆಗ್ರಹಿಸಿ ಮೂಡಿಗೆರೆ ತಾಲೂಕಿನ ಬಿ.ಹೊಸಳ್ಳಿ ಗ್ರಾಮದ ಪರಿಶಿಷ್ಟರು ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್, ಮುಖಂಡ ಹುಣಸೇಮಕ್ಕಿ ಲಕ್ಷ್ಮಣ್ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ರೂಪಾ ಅವರಿಗೆ ಮನವಿ ಸಲ್ಲಿಸಿದರು.
ಬಿ.ಹೊಸಳ್ಳಿ ಗ್ರಾಮದ ಪರಿಶಿಷ್ಟ ಬಡಾವಣೆಯ ನೂರಾರು ಮಹಿಳೆಯರು ಹಾಗೂ ನಿವಾಸಿಗಳು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡು ತಮ್ಮ ಸಮಸ್ಯೆಗಳ ಬಗ್ಗೆ ಅಳಲುತೋಡಿಕೊಂಡರು. ಈ ವೇಳೆ ಅಪರ ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಅಹವಾಲು ಆಲಿಸಬೇಕು. ಸಮಸ್ಯೆ ಪರಿಹರಿಸುವ ಭರವಸೆ ನೀಡಬೇಕೆಂದು ಆಗ್ರಹಿಸಿದರು. ಸ್ಥಳಕ್ಕಾಗಮಿಸಿದ ಅಪರ ಜಿಲ್ಲಾಧಿಕಾರಿ ನಿವಾಸಿಗಳ ಅಳಲು ಆಲಿಸಿದರು.
ಈ ವೇಳೆ ಮಾತನಾಡಿದ ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿ ವ್ಯಾಪ್ತಿಯಲ್ಲಿರುವ ಬಿ.ಹೊಸಳ್ಳಿ ಗ್ರಾಮದಲ್ಲಿರುವ ಪರಿಶಿಷ್ಟರ ಬಡಾವಣೆಯಲ್ಲಿ ಅನೇಕ ಕುಟುಂಬಗಳು ನಿವೇಶನ ರಹಿತರಾಗಿದ್ದಾರೆ. ನಿವೇಶನ ಜಾಗವಿಲ್ಲದೇ ಒಂದೇ ಮನೆಯಲ್ಲಿ 3-4 ಕುಟುಂಬಗಳು ವಾಸವಾಗಿವೆ. ಇಂತಹ ನಿವೇಶನ ರಹಿತರಿಗೆ ನಿವೇಶನ ಕಲ್ಪಿಸಬೇಕೆಂದು ಬಿ.ಹೊಸಳ್ಳಿ ಗ್ರಾಮ ಪಂಚಾಯತ್‍ಗೆ ಮನವಿ ಮಾಡಿದ್ದರಿಂದ ಗ್ರಾಮದ ಸ.ನಂ.38ರಲ್ಲಿ ಗ್ರಾಮ ಪಂಚಾಯತ್ ನಿವೇಶನ ರಹಿತರಿಗೆಂದು ಜಾಗ ಗುರುತಿಸಿ ಕಾಯ್ದಿರಿಸಿತ್ತು. ಅಂದು 12 ಮಂದಿ ನಿವೇಶನ ರಹಿತರಿಗೆ ನಿವೇಶನ ನೀಡಿ ಹಕ್ಕುಪತ್ರವನ್ನು ನೀಡಿರುವ ಗ್ರಾಮ ಪಂಚಾಯತ್ 2019ರಲ್ಲಿ ಯಾರ ಗಮನಕ್ಕೂ ತಾರದೇ ಇದೇ ಜಾಗದಲ್ಲಿ 23 ಮಂದಿಗೆ ನಿವೇಶನ ಹಂಚಿಕೆ ಮಾಡಲು ಅಧಿಕಾರಿಗಳು, ಸದಸ್ಯರು ಮುಂದಾಗಿದ್ದರು. ಈ 23 ಮಂದಿ ತೋಟ, ಜಮೀನು ಇರುವ ಶ್ರೀಮಂತರಾಗಿದ್ದು, ನಿವೇಶನ ರಹಿತರಲ್ಲದಿದ್ದರೂ ಗ್ರಾಪಂ ಅಧಿಕಾರಿಗಳು, ಸ್ಥಳೀಯ ನಿವೇಶನ ರಹಿತರನ್ನು ನಿರ್ಲಕ್ಷ್ಯಿಸಿ ಪ್ರಭಾವಿಗಳಿಗೆ ನಿವೇಶನ ನೀಡಲು ಮುಂದಾಗಿರುವುದು ಸರಿಯಲ್ಲ. ಗ್ರಾಮಸ್ಥರ ವಿರೋಧದ ಹಿನ್ನೆಲೆಯಲ್ಲಿ ಇದಕ್ಕೆ ಗ್ರಾಪಂ ಇವರಿಗೆ ನಿವೇಶನ ಹಂಚಿಕೆ ಮಾಡಿಲ್ಲ ಎಂದರು.
ಬಿ.ಹೊಸಳ್ಳಿ ಗ್ರಾಮದ ಪರಿಶಿಷ್ಟ ಜಾತಿ ಕಾಲನಿಯಲ್ಲಿ 100 ಮನೆಗಳಿದ್ದು, ಸುಮಾರು 300 ಜನಸಂಖ್ಯೆ ಇದ್ದು, ಈ ಪೈಕಿ ನಿವೇಶನ ರಹಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮನೆ ಕಟ್ಟಿಕೊಳ್ಳಲು ಬೇರೆ ಜಾಗ ಇಲ್ಲದೇ ಒಂದೇ ಮನೆಯಲ್ಲಿ 3-4 ಕುಟುಂಬಗಳು ವಾಸವಾಗಿವೆ. ಆದ್ದರಿಂದ ಕಾಲನಿಯಲ್ಲಿರುವ ನಿವೇಶನ ರಹಿತರನ್ನು ಗುರುತಿಸಿ ಮೊದಲ ಆಧ್ಯತೆಯಾಗಿ ಸ್ಥಳೀಯ ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ ಕಲ್ಪಿಸಿ, ಹಕ್ಕುಪತ್ರ ನೀಡಬೇಕು ಎಂದು ಮನವಿ ಮಾಡಿದರು.
ಗ್ರಾಮದ ಮಹಿಳೆಯರು ಈ ವೇಳೆ ಮಾತನಾಡಿ, ಗ್ರಾಪಂ ಅಧಿಕಾರಿಗಳು, ಸದಸ್ಯರು ಸರಕಾರಿ ಸೌಲಭ್ಯಗಳ ಬಗ್ಗೆ ಪರಿಶಿಷ್ಟರಿಗೆ ಯಾವುದೇ ಮಾಹಿತಿ ನೀಡುವುದಿಲ್ಲ. ಎಲ್ಲ ಸೌಲಭ್ಯಗಳು ಉಳ್ಳವರ ಪಾಲಾಗುತ್ತಿವೆ. ಗ್ರಾಪಂ ಅಧಿಕಾರಿ, ಸಿಬ್ಬಂದಿ ಸ್ಥಳೀಯರ ಯಾವ ಸಮಸ್ಯೆಗಳಿಗೂ ಸ್ಪಂದಿಸುತ್ತಿಲ್ಲ. ಗ್ರಾಮದಲ್ಲಿ ನೂರಾರು ಮಂದಿ ನಿವೇಶನ ರಹಿತರಿದ್ದರೂ ಬೇರೆ ಗ್ರಾಪಂ ವ್ಯಾಪ್ತಿಯಲ್ಲಿ ಮನೆ ಮಠ ಇರುವವರಿಗೆ ಇಲ್ಲಿ ನಿವೇಶನ ಹಂಚಿಕೆ ಮಾಡಲಾಗುತ್ತಿದೆ. ಗ್ರಾಪಂ ಅಧಿಕಾರಿ, ಸದಸ್ಯರು ಕ್ಷೇತ್ರದ ಶಾಸಕ ಕುಮಾರಸ್ವಾಮಿ ಅಣತಿ ಮೇರೆಗೆ ಸ್ಥಳೀಯರಿಗೆ ದ್ರೋಹ ಬಗೆಯುತ್ತಿದ್ದಾರೆ. ಗ್ರಾಮದಲ್ಲಿ ಪರಿಶಿಷ್ಟರ ಕಾಲನಿ ಸಂಪರ್ಕಕ್ಕೆ ರಸ್ತೆ ಇಲ್ಲ. ಮೇಲ್ವರ್ಗದವರು ರಸ್ತೆ ನಿರ್ಮಿಸಲು ಜಾಗ ಬಿಡದ ಪರಿಣಾಮ ನಿವಾಸಿಗಳು, ಶಾಲಾ ಕಾಲೇಜು ಮಕ್ಕಳು 7 ಕಿಮೀ ಸುತ್ತಾಡಿಕೊಂಡು ಬಣಕಲ್, ಮೂಡಿಗೆರೆ ಪಟ್ಟಣಕ್ಕೆ ಬರುವಂತಾಗಿದೆ. ಕೂಡಲೇ ನಿವಾಸಿಗಳ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.
ಮನವಿ ಆಲಿಸಿದ ಎಡಿಸಿ ರೂಪಾ ನಿವಾಸಿಗಳ ಸಮಸ್ಯೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಲು ಸ್ಥಳೀಯ ಕಂದಾಯ ಹಾಗೂ ಗ್ರಾಪಂ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದರು. ಸೀತಮ್ಮ, ಪಾರ್ವತಿ, ಸಾವಿತ್ರಿ, ಶೃತಿ, ಜಾನಕಿ, ಕಮಲ, ವನಿತಾ, ಶಿವಕುಮಾರ್, ಅನಿಲ್, ಕೃಷ್ಣ, ರುದ್ರೇಶ್, ತರುಣ್, ಲಕ್ಷ್ಮೀ, ಅವಿನಾಶ್, ರುದ್ರಯ್ಯ ಸೇರಿದಂತೆ ನೂರಾರು ನಿವಾಸಿಗಳು ಹಾಗೂ ಜೆಡಿಎಸ್ ಮುಖಂಡರಾದ ಮಂಜಪ್ಪ, ಚಂದ್ರಪ್ಪ ಈ ವೇಳೆ ಉಪಸ್ಥಿತರಿದ್ದರು.
ಬಿ.ಹೊಸಳ್ಳಿ ಗ್ರಾಮದಲ್ಲಿ ಮದ್ಯದಂಗಡಿ ಆರಂಭಿಸಲಾಗಿದ್ದು, ಇದರಿಂದ ಗ್ರಾಮದ ನಿವಾಸಿಗಳು ಮದ್ಯಪಾನದ ದಾಸ್ಯಕ್ಕೆ ಒಳಗಾಗುತ್ತಿದ್ದಾರೆ. ಯುವಕರೂ ಮದ್ಯಪಾನ ಮಾಡುತ್ತಾ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಪುರುಷರು ದುಡಿದು ಗಳಿಸಿದ್ದನ್ನೆಲ್ಲ ಕುಡಿದು ಮಹಿಳೆಯರೊಂದಿಗೆ ಜಗಳವಾಡುತ್ತಾ ಕುಟುಂಬದ ನೆಮ್ಮದಿ ಹಾಳು ಮಾಡುತ್ತಿದ್ದಾರೆ. ಆದ್ದರಿಂದ ಗ್ರಾಮದಲ್ಲಿರುವ ಮದ್ಯದಂಗಡಿಯನ್ನು ಕೂಡಲೇ ಬೇರೆಡೆಗೆ ಸ್ಥಳಾಂತರ ಮಾಡಬೇಕೆಂದು ಇದೇ ವೇಳೆ ಮಹಿಳೆಯರು ಎಡಿಸಿ ರೂಪಾ ಅವರನ್ನು ಆಗ್ರಹಿಸಿದರು.







