10 ಸಾವಿರ ಪೊಲೀಸ್ ವಸತಿಗೃಹ ನಿರ್ಮಾಣಕ್ಕೆ ಟೆಂಡರ್: ಆರಗ ಜ್ಞಾನೇಂದ್ರ

ಮಂಡ್ಯ, ಅ.13 ಪ್ರಸಕ್ತ ವರ್ಷ 200 ಕೋಟಿ ರೂ. ವೆಚ್ಚದಲ್ಲಿ ನೂರು ಪೊಲೀಸ್ ಠಾಣೆ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು, ಈಗಾಗಲೇ 11 ಸಾವಿರ ಪೊಲೀಸ್ ವಸತಿಗೃಹ ನಿರ್ಮಾಣ ಆಗಿದೆ. ಮತ್ತೆ 10 ಸಾವಿರ ಗೃಹಗಳನ್ನು ನಿರ್ಮಿಸಲು ಟೆಂಡರ್ ಕರೆಯಲಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಬುಧವಾರ ಜಿಲ್ಲಾ ಪೊಲೀಸ್ ಡಿಎಆರ್ ಘಟಕದ ಆಡಳಿತ ಕಚೇರಿ, ಶಸ್ತ್ರಾಗಾರ, ಶ್ವಾನದಳ ಕಟ್ಟಡ, ಸೆಂಟ್ರಲ್ ಪೊಲೀಸ್ ಠಾಣೆ ಕಟ್ಟಡ ಹಾಗು 36 ಪೊಲೀಸ್ ವಸತಿಗೃಹಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಯಡಿಯೂರಪ್ಪ ಮತ್ತು ಬೊಮ್ಮಾಯಿ ಸರಕಾರ ಪೊಲೀಸ್ ಇಲಾಖೆಗೆ ಕೊಟ್ಟಂತಹ ಹಣವನ್ನು ಇದುವರೆಗೂ ಯಾವ ಸರಕಾರಗಳೂ ಕೊಟ್ಟಿರಲಿಲ್ಲ. 140 ಠಾಣೆಗಳನ್ನು ಮೇಲ್ದೇರ್ಗೇಸಿ ಪಿಎಸ್ಸೈ ಠಾಣೆಗಳನ್ನು ಸಿಪಿಐ ಠಾಣೆಗಳಾಗಿ ಮಾಡಿದ್ದೇವೆ. ಸೈಬರ್ ವಿಭಾಗವನ್ನು ಅತ್ಯಂತ ಶಕ್ತಿಯುತವಾಗಿ ಮಾಡಿದ್ದೇವೆ. ಎಲ್ಲಾ ಜಿಲ್ಲಾಮಟ್ಟದಲ್ಲೂ ಸೈಬರ್ ವಿಭಾಗ ಕೆಲಸ ಮಾಡುವಂತೆ ಮಾಡಿದ್ದೇವೆ ಎಂದು ಅವರು ಹೇಳಿದರು.
ಮರ್ಡರ್, ಅತ್ಯಾಚಾರ ಪ್ರಕರಣಗಳ ಬಗ್ಗೆ ಸಾಕ್ಷ್ಯಾಧಾರಗಳ ಸಂಗ್ರಹಣೆಗೆ ತಜ್ಞರನ್ನು ಸ್ಥಳಕ್ಕೆ ಕಳುಹಿಸಲು ತೀರ್ಮಾನಿಸಲಾಗಿದ್ದು, ಈ ಸಂಬಂಧ 250 ತಜ್ಞರನ್ನು ಆಯ್ಕೆ ಮಾಡಲು ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡಿದ್ದೇವೆ. ಸೈಬರ್ ವಿಭಾಗವನ್ನು ಮತ್ತಷ್ಟು ಶಕ್ತಗೊಳಿಸಲು ಗುಜರಾತ್ ಸರಕಾರದ ಜತೆ ಒಪ್ಪಂದ ಮಾಡಿಕೊಂಡು ನಮ್ಮ ಅಧಿಕಾರಿಗಳನ್ನು ಅಲ್ಲಿಗೆ ತರಬೇತಿಗೆ ಕಳುಹಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.
33 ಸಾವಿರ ಸಿಬ್ಬಂದಿ ಕೊರತೆ ಇತ್ತು. ಈಗ 16 ಸಾವಿರ ಕೊರತೆ ಇದೆ. ಈ ಸಾರಿ 4 ಸಾವಿರ ಕಾನ್‍ಸ್ಟೇಬಲ್, ಪಿಎಸ್ಸೈ ತೆಗೆದುಕೊಂಡಿದ್ದೇವೆ. ಪ್ರತಿವರ್ಷ 4 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಒಂದು ವರ್ಷದಲ್ಲಿ ಸಬ್‍ಇನ್ಸ್‍ಪೆಕ್ಟರ್ ಹುದ್ದೆ ಪೂರ್ಣಗೊಳಿಸಲಾಗುವುದು. ಯಾವ ಇಲಾಖೆಯಲ್ಲಾಗದಿದ್ದರೂ ಪೊಲೀಸ್ ಇಲಾಖೆಯಲ್ಲಿ ಪ್ರತಿವರ್ಷ ನೇಮಕಾತಿ ನಡೆಯುತ್ತಿದೆ ಎಂದು ಅವರು ವಿವರಿಸಿದರು.
ಕೆಪಿಸಿಸ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕುರಿತಂತೆ ಮಾಜಿ ಸಂಸದ ಉಗ್ರಪ್ಪ ಅವರ ಆರೋಪ ಆಡಿಯೋ ವೈರಲ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಉಗ್ರಪ್ಪ ಅವರು ಈ ಸಂಬಂಧ ದೂರು ಕೊಟ್ಟರೆ ಪೊಲೀಸರು ತನಿಖೆ ಮಾಡಲಿದ್ದಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಶಾಸಕರಾದ ಎಂ.ಶ್ರೀನಿವಾಸ್, ಕೆ.ಟಿ.ಶ್ರೀಕಂಠೇಗೌಡ, ಎನ್.ಅಪ್ಪಾಜಿಗೌಡ, ನಗರಸಭಾಧ್ಯಕ್ಷ ಎಚ್.ಎಸ್.ಮಂಜು, ಉಪಾಧ್ಯಕ್ಷೆ ಇಶ್ರತ್ ಫಾತಿಮಾ, ಸದಸ್ಯೆ ಗೀತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅಶ್ವನಿ, ಅಪರ ಪೊಲೀಸ್ ವರಿಷ್ಠಾಧಿಕಾರಿ ಧನಂಜಯ, ಇತರರು ಉಪಸ್ಥಿತರಿದ್ದರು.
“ಔರಾರ್ಧಕರ್ ವರದಿ ಜಾರಿಯಿಂದ ಶೇ.80 ಪೊಲೀಸರಿಗೆ ಅನುಕೂಲವಾಗಿದೆ. ಆದರೆ, ಸಮಿತಿ ನೇಮಕಾತಿಗೆ ಮುನ್ನ ಇದ್ದ ಶೇ.20ರಷ್ಟು ಪೊಲೀಸರಿಗೆ ವರದಿಯ ಪ್ರಯೋಜನ ದೊರಕಿಲ್ಲ. ಹಣಕಾಸಿನ ಪರಿಸ್ಥಿತಿ ನೋಡಿಕೊಂಡು ಅವರ ಬೇಡಿಕೆಯನ್ನೂ ಪೂರೈಸಲಾಗುವುದು.”
-ಅರಗ ಜ್ಞಾನೇಂದ್ರ, ಗೃಹ ಸಚಿವ.







