ಕೋವಿಡ್ ಲಸಿಕೆ: ಮುಂದಿನ ವಾರ ದೇಶದಲ್ಲಿ 100 ಕೋಟಿ ತಲುಪುವ ನಿರೀಕ್ಷೆ

ಹೊಸದಿಲ್ಲಿ: ದೇಶದಲ್ಲಿ ಕೋವಿಡ್-19 ಸೋಂಕು ವಿರುದ್ಧ ಲಸಿಕಾ ಅಭಿಯಾನ ಮುಂದಿನ ವಾರ ಮತ್ತೊಂದು ಮಹತ್ವದ ಮೈಲುಗಲ್ಲು ತಲುಪಲಿದ್ದು, 100 ಕೋಟಿ ಡೋಸ್‌ಗಳನ್ನು ನೀಡಿದ ಸಾಧನೆ ಮಾಡಲಿದೆ.
ಲಸಿಕೆ ಬಗ್ಗೆ ಜಾಗೃತಿ ಮೂಡಿಸಿ, ಲಸಿಕೆ ಪಡೆಯಲು ಜನತೆಯಲ್ಲಿ ಇರುವ ಹಿಂಜರಿಕೆಯನ್ನು ದೂರ ಮಾಡುವ ನಿಟ್ಟಿನಲ್ಲಿ ಖಾಸಗಿ ಮತ್ತು ಸರ್ಕಾರೇತರ ಸಂಸ್ಥೆಗಳನ್ನು ಅಭಿಯಾನಕ್ಕೆ ಸೇರಿಸಿಕೊಳ್ಳಲು ಸರ್ಕಾರ ಮುಂದಾಗಿದೆ.
ಲಸಿಕೆ ಪೂರೈಕೆಯನ್ನು ವ್ಯಾಪಕಗೊಳಿಸುವ ನಿಟ್ಟಿನಲ್ಲಿ ಅಕ್ಟೋಬರ್ ತಿಂಗಳಿನಲ್ಲಿ 28 ಕೋಟಿ ಲಸಿಕಾ ಡೋಸ್‌ಗಳನ್ನು ಉತ್ಪಾದಿಸಲಾಗುತ್ತದೆ ಎಂದು ಆರೋಗ್ಯ ಸಚಿವ ಮನಸುಖ್ ಮಾಂಡವಿಯಾ ಹೇಳಿದ್ದಾರೆ.
ದೇಶದಲ್ಲಿ ಶೇಕಡ 73ರಷ್ಟು ವಯಸ್ಕರು ಇದುವರೆಗೆ ಕನಿಷ್ಠ ಒಂದು ಡೋಸ್ ಲಸಿಕೆ ಪಡೆದಿದ್ದು, ಶೇಕಡ 29ರಷ್ಟು ಮಂದಿ ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ. ಈ ತಿಂಗಳು ಲಭ್ಯವಾಗುವ 28 ಕೋಟಿ ಡೋಸ್‌ಗಳ ಪೈಕಿ 22 ಕೋಟಿ ಕೋವಿಶೀಲ್ಡ್ ಹಾಗೂ ಆರು ಕೋಟಿ ಕೊವ್ಯಾಕ್ಸಿನ್ ಆಗಿವೆ. ಇದು ಕಳೆದ ತಿಂಗಳು ಲಭ್ಯವಾದ 22 ಕೋಟಿಗಿಂತ ಅಧಿಕ. ಇದರ ಜತೆಗೆ ಸುಮಾರು 60 ಲಕ್ಷ ಡಿಎನ್‌ಎ ಲಸಿಕೆ ಉತ್ಪಾದಿಸಲಾಗುವುದು ಎಂದು ಪತ್ರಕರ್ತರ ಜತೆಗಿನ ಸಂವಾದದಲ್ಲಿ ಸಚಿವರು ಸ್ಪಷ್ಟಪಡಿಸಿದರು.
ಇದುವರೆಗೆ ಸುಮಾರು 97 ಕೋಟಿ ಲಸಿಕೆ ನೀಡಲಾಗಿದ್ದು, ಮುಂದಿನ ವಾರ ಅಂದರೆ ಅಕ್ಟೋಬರ್ 19 ಅಥವಾ 20ರಂದು ಇದು 100 ಕೋಟಿ ತಲುಪುವ ನಿರೀಕ್ಷೆ ಇದೆ ಎಂದು ಹೇಳಿದರು. ಲಸಿಕೆ ಪಡೆಯಲು ಬಾಕಿ ಇರುವ ಇತರರಿಗೆ ಸ್ಫೂರ್ತಿ ನೀಡುವ ದೃಷ್ಟಿಯಿಂದ 100 ಕೋಟಿಯ ಸಾಧನೆಯನ್ನು ದೇಶಾದ್ಯಂತ ಸಂಭ್ರಮಿಸಲಾಗುತ್ತದೆ ಎಂದು ಸಚಿವರು ವಿವರಿಸಿದರು.