ಪಂಜಾಬ್ ಸಿಎಂ ಮಗನ ವಿವಾಹದಲ್ಲಿ ಪಾನಮತ್ತ ಅಧಿಕಾರಿಗಳು !

ಪಂಜಾಬ್ ಸಿಎಂ (ಫೋಟೊ : PTI)
ಚಂಡೀಗಢ: ಪಂಜಾಬ್ ಮುಖ್ಯಮಂತ್ರಿಯ ಮಗನ ವಿವಾಹ ಸಮಾರಂಭದಲ್ಲಿ ಹಲವು ಮಂದಿ ಪೊಲೀಸ್ ಅಧಿಕಾರಿಗಳು ಸಮವಸ್ತ್ರದಲ್ಲಿದ್ದೇ ಪಾನಮತ್ತ ಸ್ಥಿತಿಯಲ್ಲಿದ್ದರು ಎಂದು ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ ಬರೆದ ಪತ್ರದಲ್ಲಿ ಹಿರಿಯ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.
ಹಲವು ಭದ್ರತಾ ಲೋಪಗಳನ್ನು ಕೂಡಾ ಈ ಪತ್ರದಲ್ಲಿ ಪಟ್ಟಿ ಮಾಡಲಾಗಿದೆ. ಘಟನೆಯ ಸಂಬಂಧ ಒಬ್ಬ ಪೊಲೀಸ್ ಅಧಿಕಾರಿಯನ್ನು ಆಮಾನತುಗೊಳಿಸಲಾಗಿದೆ.
ಮುಖ್ಯಮಂತ್ರಿ ಚರಣ್ ಜೀತ್ ಸಿಂಗ್ ಚನ್ನಿ ಅವರ ಪುತ್ರ ನವಜೀತ್ ಸಿಂಗ್, ಎಂಜಿನಿಯರಿಂಗ್ ಪದವೀಧರೆ ಸಿಮ್ರನ್ ಧೀರ್ ಕೌರ್ ಅವರನ್ನು ರವಿವಾರ ಮೊಹಾಲಿ ಗುರುದ್ವಾರಲ್ಲಿ ವಿವಾಹವಾಗಿದ್ದರು. ಅಕ್ಟೋಬರ್ 8ರಂದು ಮೊಹಾಲಿಯ ಅರಿಸ್ಟಾ ರೆಸಾರ್ಟ್ನಲ್ಲಿ ಆಯೋಜಿಸಿದ್ದ ಮಹಿಳಾ ಸಂಗೀತ ಕಾರ್ಯಕ್ರಮದಲ್ಲಿ ಕೂಡಾ ಭದ್ರತಾ ಲೋಪ ಪತ್ತೆಯಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಇಡೀ ಸಮಾರಂಭಕ್ಕೆ ಸಾಕಷ್ಟು ಭದ್ರತಾ ವ್ಯವಸ್ಥೆ ಮಾಡಿರಲಿಲ್ಲ ಎಂದು ಹಿರಿಯ ಅಧಿಕಾರಿ, ಡಿಜಿಪಿಗೆ ಬರೆದ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.ಮುಖ್ಯ ಪ್ರವೇಶದ್ವಾರದಲ್ಲಿ ಇದ್ದ ದುರ್ಬಲ ತಪಾಸಣೆ ವ್ಯವಸ್ಥೆ ಕಾರಣದಿಂದ ಹಲವು ಮಂದಿ ಸಭಾಂಗಣದ ಒಳಕ್ಕೆ ಆಗಮಿಸಿದ್ದರು ಎಂದು ಹೇಳಲಾಗಿದೆ.
ಸ್ಥಳದಲ್ಲಿ ನಿಯೋಜಿಸಲ್ಪಟ್ಟಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ಆಹಾರ ಮತ್ತು ಪಾನೀಯ ಆಸ್ವಾದಿಸುವಲ್ಲಿ ತಲ್ಲೀನರಾಗಿದ್ದರು. ಗಜೆಟೆಡ್ ಶ್ರೇಣಿಯ ಪೊಲೀಸ್ ಅಧಿಕಾರಿಯೊಬ್ಬರು ಸಚಿವರೊಬ್ಬರ ಪಾದಮುಟ್ಟಿ ನಮಸ್ಕರಿಸಿದ್ದಾರೆ. ಇದು ಚರ್ಚೆಗೆ ಗ್ರಾಸವಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.