ಪ್ರಧಾನಿಯ ಹೆಸರೊಂದೇ ಮತಗಳನ್ನು ಗಳಿಸಿಕೊಡಬಹುದು ಎಂಬುದಕ್ಕೆ ಖಾತ್ರಿಯಿಲ್ಲ: ಹರ್ಯಾಣ ಕುರಿತು ಕೇಂದ್ರ ಸಚಿವ

ಕೇಂದ್ರ ಸಚಿವ ರಾವ್ ಇಂದರ್ಜಿತ್ ಸಿಂಗ್ (Photo: Twitter/@Rao_InderjitS)
ಚಂಡೀಗಢ: ಪ್ರಧಾನಿ ನರೇಂದ್ರ ಮೋದಿಯ ಹೆಸರೊಂದನ್ನೇ ಹರ್ಯಾಣ ಚುನಾವಣೆಯಲ್ಲಿ ಮೂರನೇ ಬಾರಿಗೆ ಗೆಲುವು ಸಾಧಿಸಲು ಬಿಜೆಪಿ ಅವಲಂಬಿಸಲು ಸಾಧ್ಯವಿಲ್ಲ ಎಂಬರ್ಥದ ಹೇಳಿಕೆಯನ್ನು ಪಕ್ಷದ ಆಂತರಿಕ ಸಭೆಯೊಂದರಲ್ಲಿ ಕೇಂದ್ರ ಸಚಿವ ರಾವ್ ಇಂದರ್ಜಿತ್ ಸಿಂಗ್ ನೀಡಿದ್ದಾರೆನ್ನಲಾಗಿದೆ.
ಕೇಂದ್ರ ಯೋಜನಾ ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವರಾದ ಸಿಂಗ್ ಅವರು ಸಭೆಯೊಂದರಲ್ಲಿ ಆಡಿದ್ದಾರೆನ್ನಲಾದ ಮಾತುಗಳ ವೀಡಿಯೋ ತುಣುಕೊಂದು ಹರಿದಾಡುತ್ತಿದೆ. "ನರೇಂದ್ರ ಮೋದಿ ಅವರ ಆಶೀರ್ವಾದ ನಮ್ಮ ಮೇಲಿದೆ. ಆದರೆ ನಮ್ಮ ರಾಜ್ಯದಲ್ಲಿ ಅವರ ಹೆಸರೊಂದೇ ನಮಗೆ ಮತಗಳನ್ನು ದೊರಕಿಸಿಕೊಡುತ್ತವೆ ಎಂಬುದಕ್ಕೆ ಖಾತ್ರಿಯಿಲ್ಲ. ಅವರು ಮೋದಿ ಹೆಸರಿನಲ್ಲಿ ಮತ ನೀಡುತ್ತಾರೆಂಬುದು ನಮ್ಮ ಉದ್ದೇಶ. ತಳಮಟ್ಟದಲ್ಲಿರುವ ಬಿಜೆಪಿ ಕಾರ್ಯಕರ್ತರ ಮೇಲೆ ಎಲ್ಲವೂ ಅವಲಂಬಿತವಾಗಿದೆ,'' ಎಂದು ಸಿಂಗ್ ಹೇಳುವುದು ಕೇಳಿಸುತ್ತದೆ.
2014 ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸಾಧಿಸಿದ ಅಭೂತಪೂರ್ವ ಗೆಲುವು ಕುರಿತು ಪ್ರತಿಕ್ರಿಯಿಸಿದ ಅವರು "ಮೋದೀ ಜಿ ಅವರಿಂದಾಗಿ ಬಿಜೆಪಿ ಕೇಂದ್ರದಲ್ಲಿ ಸರಕಾರ ರಚಿಸುವಂತಾಯಿತೆಂದು ನಾನು ಒಪ್ಪುತ್ತೇನೆ. ಇದು ರಾಜ್ಯಗಳ ಮೇಲೂ ಪ್ರಭಾವ ಬೀರಿತು. ಹರ್ಯಾಣಾದಲ್ಲಿ ನಾವು ಮೊದಲ ಬಾರಿ ಸರಕಾರ ರಚಿಸಿದ ನಂತರ ಎರಡನೇ ಬಾರಿಯೂ ಸರಕಾರ ರಚಿಸಿದೆವು. ಆದರೆ ಸಾಮಾನ್ಯವಾಗಿ ಇನ್ನೊಂದು ಪಕ್ಷ ಅವಕಾಶ ಪಡೆಯುತ್ತದೆ. ಇನ್ನೊಂದು ಚುನಾವಣೆಯಲ್ಲಿ ಹಿಂದಿನ ಚುನಾವಣೆಯಲ್ಲಿ ಗಳಿಸಿದ ಸ್ಥಾನಗಳನ್ನು ಉಳಿಸಿಕೊಳ್ಳಬಹುದೇ ಎಂಬ ಕುರಿತು ಯೋಚಿಸಬೇಕಿದೆ,'' ಎಂದು ಅವರು ಹೇಳಿದರು.
ಕಳೆದ ಚುನಾವಣೆಯಲ್ಲಿ ಬಿಜೆಪಿ 90 ಕ್ಷೇತ್ರಗಳ ಪೈಕಿ 40ರಲ್ಲಿ ಜಯ ಸಾಧಿಸಿದ್ದರೆ ಅದಕ್ಕಿಂತಲೂ ಹಿಂದಿನ ಚುನಾವಣೆಯಲ್ಲಿ 47 ಸ್ಥಾನಗಳನ್ನು ಗೆದ್ದಿತ್ತು.