ಯುದ್ಧದ ಸಮಯದಲ್ಲಿ ಇಂದಿರಾ ಗಾಂಧಿ ಭಾರತವನ್ನು ಮುನ್ನಡೆಸಿದ್ದರು: ರಾಜ್ ನಾಥ್ ಶ್ಲಾಘನೆ

ಹೊಸದಿಲ್ಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ದೇಶವನ್ನು ಹಲವು ವರ್ಷಗಳ ಕಾಲ ಮುನ್ನಡೆಸಿದ್ದಲ್ಲದೆ, ಯುದ್ಧದ ಸಮಯದಲ್ಲಿ ಕೂಡ ದೇಶವನ್ನು ಮುನ್ನಡೆಸಿದ್ದರು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಹೇಳಿದರು. ಈ ಮೂಲಕ ಪಾಕಿಸ್ತಾನದೊಂದಿಗಿನ 1971 ರ ಯುದ್ಧದಲ್ಲಿ ಇಂದಿರಾ ಗಾಂಧಿ ಅವರ ಪಾತ್ರವನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.
ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಸೆಮಿನಾರ್‌ನಲ್ಲಿ ಸಶಸ್ತ್ರ ಪಡೆಗಳಲ್ಲಿ ಮಹಿಳೆಯರ ಪಾತ್ರದ ಕುರಿತು ಭಾಷಣ ಮಾಡಿದ ರಕ್ಷಣಾ ಸಚಿವರು, ರಾಣಿ ಲಕ್ಷ್ಮಿ ಬಾಯಿ ಹಾಗೂ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಬಗ್ಗೆ ಮಾತನಾಡಿದ್ದಾರೆ ಮತ್ತು ರಾಷ್ಟ್ರದ ಅಭಿವೃದ್ಧಿಯಲ್ಲಿ ಮಹಿಳಾ ಶಕ್ತಿಯನ್ನು ಬಳಸಿಕೊಳ್ಳುವಲ್ಲಿ ಭಾರತಕ್ಕೆ ಸಕಾರಾತ್ಮಕ ಅನುಭವವಿದೆ ಎಂದರು.
"ಭಾರತದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಹಲವಾರು ವರ್ಷಗಳ ಕಾಲ ದೇಶವನ್ನು ಮುನ್ನಡೆಸಿದ್ದಲ್ಲದೆ, ಯುದ್ಧದ ಸಮಯದಲ್ಲಿ ಕೂಡ ಅದನ್ನೇ ಮಾಡಿದರು. ತೀರಾ ಇತ್ತೀಚೆಗೆ, ಪ್ರತಿಭಾ ಪಾಟೀಲ್ ಭಾರತದ ರಾಷ್ಟ್ರಪತಿಯಾಗಿದ್ದರು ಹಾಗೂ ಭಾರತೀಯ ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಆಗಿದ್ದರು”ಎಂದು ರಕ್ಷಣಾ ಸಚಿವರು ಹೇಳಿದರು.
ಸಶಸ್ತ್ರ ಪಡೆಗಳಲ್ಲಿ ಮಹಿಳೆಯರ ಪಾತ್ರವನ್ನು ಚರ್ಚಿಸುವುದು ಸಮರ್ಥನೀಯ ವಾಗಿದ್ದರೂ ಭದ್ರತೆ ಮತ್ತು ರಾಷ್ಟ್ರ ನಿರ್ಮಾಣದ ಎಲ್ಲ ಕ್ಷೇತ್ರಗಳಲ್ಲಿ ಅವರ ವಿಶಾಲ ಕೊಡುಗೆಯನ್ನು ಗುರುತಿಸಬೇಕು ಮತ್ತು ಬಲಪಡಿಸಬೇಕು ಎಂದು ಸಿಂಗ್ ಹೇಳಿದರು.







