ಬಿಜೆಪಿ ಕಾರ್ಯಕರ್ತರ ಕುಟುಂಬವನ್ನು ಭೇಟಿಯಾಗಿ ರೈತರ ಮನೆಗೆ ತೆರಳದ ಉತ್ತರಪ್ರದೇಶ ಸಚಿವ
ಲಖಿಂಪುರ ಖೇರಿ ಹಿಂಸಾಚಾರ

photo: Twitter/Brajesh Pathak
ಲಕ್ನೊ: ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಅಕ್ಟೋಬರ್ 3 ರಂದು ನಡೆದ ಹಿಂಸಾಚಾರದಲ್ಲಿ ಮೃತಪಟ್ಟ ಎರಡು ಕುಟುಂಬಗಳನ್ನು ಉತ್ತರ ಪ್ರದೇಶ ಕಾನೂನು ಸಚಿವ ಬ್ರಜೇಶ್ ಪಾಠಕ್ ಬುಧವಾರ ಭೇಟಿ ಮಾಡಿದರು. ಆದರೆ ಕೇಂದ್ರ ಸಚಿವರ ಪುತ್ರ ಹರಿಸಿದ ಕಾರಿನಡಿ ಬಿದ್ದು ಸಾವನ್ಮಪ್ಪಿದ್ದ ನಾಲ್ವರು ರೈತರ ಕುಟುಂಬವನ್ನು ಭೇಟಿಯಾಗಿಲ್ಲ.
ಭಾರತೀಯ ಜನತಾ ಪಕ್ಷದ ಕಾರ್ಯಕರ್ತ ಶುಭಂ ಮಿಶ್ರಾ ಹಾಗೂ ಕೇಂದ್ರ ಸಚಿವ ಅಜಯ್ ಮಿಶ್ರಾ ಬೆಂಗಾವಲಿನಲ್ಲಿ ಕಾರಿನ ಚಾಲಕ ಹರಿ ಓಂ ಮಿಶ್ರಾ ಅವರ ಕುಟುಂಬಗಳನ್ನು ಪಾಠಕ್ ಭೇಟಿಯಾದರು.
ಕುಟುಂಬಗಳಿಗೆ ಸಾಂತ್ವನ ಹೇಳಲು ಭೇಟಿ ನೀಡಿದ್ದೇನೆ ಹಾಗೂ ಪ್ರಕರಣದ ಬಗ್ಗೆ ನ್ಯಾಯಯುತ ತನಿಖೆ ನಡೆಸಲಾಗುವುದು ಎಂದು ಸಚಿವರು ಭರವಸೆ ನೀಡಿದರು ಎಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
"ಭದ್ರತಾ ಬೆದರಿಕೆ ಇರುವುದರಿಂದ ಶಸ್ತ್ರಾಸ್ತ್ರ ಪರವಾನಗಿ ಸೇರಿದಂತೆ ಕುಟುಂಬದವರು ಕೆಲವು ಬೇಡಿಕೆಗಳನ್ನು ಇಟ್ಟಿದ್ದರು. ನಿಯಮಗಳ ಪ್ರಕಾರ ಅದನ್ನು ನೋಡಲಾಗುವುದು ಎಂದು ನಾನು ಅವರಿಗೆ ಭರವಸೆ ನೀಡಿದ್ದೇನೆ’’ ಎಂದರು.
ಲಖಿಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ಗುರ್ವಿಂದರ್ ಸಿಂಗ್, ಲವಪ್ರೀತ್ ಸಿಂಗ್, ದಲ್ಜಿತ್ ಸಿಂಗ್ ಹಾಗೂ ನಕ್ಷತ್ರ ಸಿಂಗ್ ಎಂಬ ನಾಲ್ವರು ರೈತರು, ಪತ್ರಕರ್ತ ರಮಣ್ ಕಶ್ಯಪ್ ಹಾಗೂ ಬಿಜೆಪಿಯ ಇನ್ನೊಬ್ಬ ಕಾರ್ಯಕರ್ತರಾದ ಶ್ಯಾಮ್ ಸುಂದರ್ ನಿಶಾದ್ ಅವರನ್ನು ಹತ್ಯೆಗೈಯ್ಯಲಾಗಿತ್ತು.
ಪಾಠಕ್ ಅವರು ಹಿಂಸಾಚಾರ ನಡೆದ ಬಳಿಕ ಲಖಿಂಪುರ ಖೇರಿಗೆ ಭೇಟಿ ನೀಡಿದ ಮೊದಲ ರಾಜ್ಯ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕರಾಗಿದ್ದಾರೆ. ಆದರೆ ಸಚಿವರು ನಾಲ್ವರು ರೈತರ ಕುಟುಂಬ ಹಾಗೂ ಕಶ್ಯಪ್ ಹಾಗೂ ನಿಶಾದ್ ಕುಟುಂಬವನ್ನು ಭೇಟಿಯಾಗಿಲ್ಲ ಎಂದು 'ಇಂಡಿಯನ್ ಎಕ್ಸ್ ಪ್ರೆಸ್' ವರದಿ ಮಾಡಿದೆ.