ಪ್ರೊ.ಜಿ.ಕೆ ಗೋವಿಂದ ರಾವ್ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ

ಪ್ರೊ. ಜಿ.ಕೆ ಗೋವಿಂದ ರಾವ್
ಬೆಂಗಳೂರು, ಅ. 15: ವಿಚಾರವಾದಿ, ಹಿರಿಯ ಸಾಹಿತಿ, ರಂಗಕರ್ಮಿ ಹಾಗೂ ನಟ ಪ್ರೊ.ಜಿ.ಕೆ.ಗೋವಿಂದ ರಾವ್ ಅವರು ಹುಬ್ಬಳ್ಳಿಯಲ್ಲಿನ ಅವರ ಪುತ್ರಿಯ ನಿವಾಸದಲ್ಲಿ ಶುಕ್ರವಾರ ಬೆಳಗ್ಗೆ ಅಸುನೀಗಿದ್ದಾರೆ.
ಅವರಿಗೆ 84 ವರ್ಷ ವಯಸ್ಸಾಗತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀಯುತರು, ಎರಡು ತಿಂಗಳ ಹಿಂದೆ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. 5 ದಿನದ ಹಿಂದೆ ಇವರ ಆರೋಗ್ಯ ಇನ್ನಷ್ಟು ಕ್ಷೀಣಗೊಂಡ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಡೆಯ ಎರಡು ದಿನ ಅರೆ ಪ್ರಜ್ಞಾವಸ್ಥೆಗೆ ತೆರಳಿದ್ದ ಅವರು ಇಂದು ಬೆಳಗಿನ ಜಾವ ಇಹಲೋಕ ತ್ಯಜಿಸಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಜಿ.ಕೆ.ಗೋವಿಂದ ರಾವ್ ಅವರು 1937ರ ಎಪ್ರಿಲ್ 27ರಂದು ಬೆಂಗಳೂರಿನಲ್ಲಿ ಜನಿಸಿದ್ದರು. ತಂದೆ ಜಿ.ಎಂ.ಕೃಷ್ಣಮೂರ್ತಿ ತಾಯಿ ಲಕ್ಷ್ಮೀದೇವಿ. ಪತ್ನಿಯ ಹೆಸರು ಲಕ್ಷ್ಮೀದೇವಿ. ಶಾಮಲಾ ಹಾಗೂ ಶಾಕುಂತಲಾ ಇಬ್ಬರು ಪುತ್ರಿಯರು. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಪ್ರೌಢ ಶಿಕ್ಷಣ ಪೂರೈಸಿದ ಅವರಿಗೆ ಖ್ಯಾತ ವಿಮರ್ಶಕ ರಾಮಚಂದ್ರಶರ್ಮ, ವಿಚಾರವಾದಿ ಎಚ್. ನರಸಿಂಹಯ್ಯ ಶಿಕ್ಷಕರಾಗಿ ಲಭಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕ ಪದವಿ ವ್ಯಾಸಂಗ ಮಾಡಿದ ಬಳಿಕ ಸಾಗರದ ಲಾಲ್ ಬಹದ್ದೂರ್ ಕಾಲೇಜಿನಲ್ಲಿ ಹಾಗೂ ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನಲ್ಲಿ ಆಂಗ್ಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಆನಂತರ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ 27 ವರ್ಷಕ್ಕೂ ಅಧಿಕ ಕಾಲ ಉಪನ್ಯಾಸಕರಾಗಿ ಹಾಗೂ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
12ನೆ ವರ್ಷದಲ್ಲಿ ರಂಗಭೂಮಿ ಪ್ರವೇಶ: ಪ್ರೊ.ಜಿಕೆಜಿ ಎಂದೇ ಚಿರಪರಿಚಿತರಾದ ಗೋವಿಂದರಾವ್ ಅವರು, ತಮ್ಮ 12ನೆ ವರ್ಷದಲ್ಲಿಯೇ ರಂಗಭೂಮಿ ಪ್ರವೇಶ ಮಾಡುವ ಮೂಲಕ ಕಲಾವಿದರಾಗಿ ಹೊರಹೊಮ್ಮಿದರು. `ಮೀನಾ ಮದುವೆ' ಎಂಬ ನಾಟಕದಲ್ಲಿ ಅಭಿನಯಿಸಿ ಪ್ರಥಮ ಬಹುಮಾನ ಪಡೆದಿದ್ದರು. ನಂತರ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ `ಹೋಂರೂಲ್' ನಾಟಕದಲ್ಲಿಯೂ ನಟಿಸಿ ಗಮನ ಸೆಳೆದರು.
ಹವ್ಯಾಸಿ ರಂಗಭೂಮಿ, ಧಾರಾವಾಹಿ, ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಕಾದಂಬರಿಕಾರ, ಬರಹಗಾರ, ವಿಚಾರವಾದಿ, ಪ್ರಗತಿಪರ ಚಿಂತಕ ಹಾಗೂ ಸಾಮಾಜಿಕ ಹೋರಾಟಗಾರರಾಗಿಯೂ ಪ್ರೊ.ಜಿ.ಕೆ.ಗೋವಿಂದರಾವ್ ಅವರು ಗಮನ ಸೆಳೆದಿದ್ದರು. ಪ್ರಖರ ಚಿಂತಕರಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದರು.
ಈಶ್ವರ ಅಲ್ಲಾ(ಕಿರು ಕಾದಂಬರಿ), ಶೇಕ್ಸ್ಪಿಯರ್ ಎರಡು ನಾಟಕಗಳ ಅಧ್ಯಯನ, ಶೇಕ್ಸ್ಪಿಯರ್ ಸಂವಾದ(ವಿಮರ್ಶಾ ಲೇಖನಗಳು), ನಡೆ-ನುಡಿ, ನಾಗರಿಕತೆ ಮತ್ತು ಅರಾಜಕತೆ, ಬಿಂಬ ಪ್ರತಿಬಿಂಬ, ಕ್ರಿಯೆ ಪ್ರತಿಕ್ರಿಯೆ, ಮನು ವರ್ಸಸ್ ಅಂಬೇಡ್ಕರ್: ತಮ್ಮ ಆಯ್ಕೆ ಯಾವುದು? (ಸಂಕೀರ್ಣ ಬರಹಗಳ ಸಂಗ್ರಹಗಳು) ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ಗೃಹ, ಮಿಥಿಲೆಯ ಸೀತೆಯರು, ಕಫ್ರ್ಯೂ, ಶಾಸ್ತ್ರಿ ಸೇರಿದಂತೆ ಹಲವು ಚಿತ್ರಗಳಲ್ಲಿ ಗೋವಿಂದ ರಾವ್ ನಟಿಸಿದ್ದರು.
ಸಾವಿನಲ್ಲೂ ಸಾರ್ಥಕತೆ: ಪ್ರೊ.ಜಿಕೆಜಿ ಅವರ ಇಚ್ಛೆಯಂತೆ ಅತ್ಯಂತ ಸರಳವಾಗಿ ಇಂದು ಬೆಳಗ್ಗೆ ಅಂತ್ಯಕ್ರಿಯೆ ನೆರವೇರಿಸಲಾಗಿದ್ದು, ಇದಕ್ಕೂ ಮುನ್ನ ನೇತ್ರದಾನ ಮಾಡುವ ಮೂಲಕ ಕುಟುಂಬ ಸದಸ್ಯರು ಆದರ್ಶ ಮೆರೆದಿದ್ದಾರೆ. ಅಳಿಯ ಗುರುಪ್ರಸಾದ್(ಜಿ.ಕೆ.ಗೋವಿಂದರಾವ್ ಅವರ ಪುತ್ರಿ ಶ್ಯಾಮಲಾ ಅವರ ಪತಿ) ಹುಬ್ಬಳ್ಳಿಯ ಎಂ.ಎಂ.ಜೋಷಿ ಆಸ್ಪತ್ರೆಯಲ್ಲಿ ನೇತ್ರ ತಜ್ಞರಾಗಿದ್ದು, ಗೋವಿಂದರಾವ್ ಅವರ ಇಚ್ಛೆಯಂತೆ ಎಂ.ಎಂ.ಜೋಷಿ ನೇತ್ರವಿಜ್ಞಾನ ಸಂಸ್ಥೆಗೆ ನೇತ್ರದಾನ ಮಾಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಗಣ್ಯರ ಕಂಬನಿ: ಪ್ರೊ.ಗೋವಿಂದ ರಾವ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಸಚಿವರಾದ ಡಾ.ಅಶ್ವತ್ಥ ನಾರಾಯಣ, ವಿ.ಸುನೀಲ್ ಕುಮಾರ್ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
`ಕನ್ನಡದ ಹಿರಿಯ ನಟ, ಚಿಂತಕ, ರಂಗಭೂಮಿ, ಸಿನಿಮಾ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮ ಛಾಪನ್ನು ಮೂಡಿದಿದ್ದ ಪ್ರೊ.ಜಿ.ಕೆ.ಗೋವಿಂದ ರಾವ್ ಅವರು, ತಮ್ಮ ಜನಪರ ನಿಲುವಿನಿಂದ ಜನಮಾನಸದಲ್ಲಿ ವಿಶಿಷ್ಟ ಸ್ಥಾನ ಗಳಿಸಿದ್ದರು. ಅವರ ನಿಧನದಿಂದ ಒಬ್ಬ ಅನನ್ಯ ಚಿಂತಕನನ್ನು ನಾಡು ಕಳೆದುಕೊಂಡಂತಾಗಿದೆ. ಭಗವಂತ ಮೃತರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ಅವರ ಅಗಲಕೆಯ ದುಃಖ ಭರಿಸುವ ಶಕ್ತಿ ನೀಡಲಿ'
-ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ
`ಹಿರಿಯ ಲೇಖಕ, ಚಿಂತಕ, ರಂಗ ಕಲಾವಿದ, ನಟ ಪ್ರೊ.ಜಿ.ಕೆ.ಗೋವಿಂದರಾವ್ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ನನ್ನ ಹಿತೈಷಿ, ಮಾರ್ಗದರ್ಶಕ ಮತ್ತು ಆತ್ಮೀಯ ಸ್ನೇಹಿತರಾಗಿದ್ದ ಪ್ರೊ.ಜಿಕೆಜಿ ಅವರಿಗೆ ಗೌರವದ ನಮನಗಳು. ಅವರನ್ನು ಕಳೆದುಕೊಂಡ ಕುಟುಂಬದ ಸದಸ್ಯರು, ಶಿಷ್ಯರು, ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ'
-ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ
`ಹಿರಿಯ ಚಿಂತಕ, ರಂಗಕರ್ಮಿ ಪ್ರೊ.ಜಿ.ಕೆ.ಗೋವಿಂದರಾವ್ ವಿಧಿವಶರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದ ಅವರು ಚಲನಚಿತ್ರ, ಸಾಹಿತ್ಯ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದರು. ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು, ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ'
-ಬಿ.ಎಸ್.ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ
`ಪ್ರೊ.ಜಿ.ಕೆ.ಗೋವಿಂದರಾವ್ ಅವರು ಕನ್ನಡ ಸಾಂಸ್ಕೃತಿಕ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಬಹಳ ದೊಡ್ಡದು. ಸಮುದಾಯ ತಂಡದ ಸಕ್ರಿಯ ಸದಸ್ಯರಾಗಿದ್ದ ಜಿಕೆಜಿ ಹೊಸಅಲೆಯ ಸಿನಿಮಾಗಳ ಮೂಲಕ ತಮ್ಮನ್ನು ಗುರುತಿಸಿಕೊಂಡರು. ಹವ್ಯಾಸಿ ರಂಗ ತಂಡಗಳ ಬೆಳವಣಿಗೆಗೆ ಅವರ ಕೊಡುಗೆ ಮಹತ್ವದ್ದು. ಅಧ್ಯಾಪಕರಾಗಿಯೂ ಅವರು ದೊಡ್ಡ ಶಿಷ್ಯವೃಂದ ಹೊಂದಿದ್ದವರು. ಸಿನಿಮಾ ನಾಟಕ ಕಿರುತೆರೆ ಹೀಗೆ ಎಲ್ಲ ಪ್ರಕಾರಗಳಲ್ಲಿಯೂ ತಮ್ಮ ಛಾಪು ಮೂಡಿಸಿದ್ದ ಜಿ.ಕೆ.ಗೋವಿಂದರಾವ್ ನಿಧನದಿಂದ ಕನ್ನಡ ಸಾಂಸ್ಕೃತಿಕ ಲೋಕ ಒಬ್ಬ ಪ್ರಖರ ಪ್ರತಿಭೆಯ ರಂಗಕರ್ಮಿ ಹಾಗೂ ಚಿಂತಕನನ್ನು ಕಳೆದುಕೊಂಡಂತಾಗಿದೆ'
-ವಿ.ಸುನೀಲ್ ಕುಮಾರ್ ಕನ್ನಡ ಮತ್ತು ಸಂಸ್ಕೃತಿ ಸಚಿವ







