ಮಗುವನ್ನು ಬದಲಿಸಲಾಗಿಲ್ಲ: ಲೇಡಿಗೋಶನ್ ಆಸ್ಪತ್ರೆ ಸ್ಪಷ್ಟನೆ
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ : ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ

ಮಂಗಳೂರು, ಅ.15: ಕುಂದಾಪುರದ ಮಹಿಳೆಯೊಬ್ಬರ ಹೆರಿಗೆಯ ಸಂದರ್ಭ ಹೆಣ್ಣು ಮಗು ಎಂದು ಹೇಳಿ 18 ದಿನಗಳ ಬಳಿಕ ಮಗುವನ್ನು ಬೇರೆ ಆಸ್ಪತ್ರೆಗೆ ದಾಖಲಿಸಿದಾಗ ಪೋಷಕರಿಗೆ ಆ ಮಗು ಗಂಡು ಮಗು ಎಂಬುದಾಗಿ ತಿಳಿದು ಬಂದ ಪ್ರಕರಣಕ್ಕೆ ಸಂಬಂಧಿಸಿ, ಮಗುವಿನ ಜನನದ ಲಿಖಿತ ರೂಪದ ಎಂಟ್ರಿ ವೇಳೆ ಕರ್ತವ್ಯದಲ್ಲಿದ್ದವರಿಂದ ತಪ್ಪಾಗಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ತಿಳಿಸಿದ್ದಾರೆ.
ಪ್ರಕರಣದ ಕುರಿತಂತೆ ‘ವಾರ್ತಾಭಾರತಿ’ ಇಂದು ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾ ಪ್ರಸಾದ್ ಅವರನ್ನು ಈ ಬಗ್ಗೆ ವಿಚಾರಿಸಿದಾಗ, ‘‘ಮಗುವಿನ ಜನನದ ಸಂದರ್ಭ ಕೇಸ್ ಶೀಟ್‌ನಲ್ಲಿ ಮಗುವಿನ ಲಿಂಗವನ್ನು ದಾಖಲಿಸುವಾಗ ಮಾಡಲಾದ ತಪ್ಪಿನಿಂದ ಪೋಷಕರೂ ಗೊಂದಲದ ಜತೆಗೆ ಒತ್ತಡಕ್ಕೆ ಕಾರಣವಾಗಿದೆ. ಪ್ರಕರಣದ ಬಗ್ಗೆ ಸಮಗ್ರ ತನಿಖೆಯನ್ನು ಮಾಡಲಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ವಹಿಸಲಾಗುವುದು. ಮಾತ್ರವಲ್ಲದೆ ಈ ಬಗ್ಗೆ ಜಿಲ್ಲಾಧಿಕಾರಿಯವರ ಗಮನಕ್ಕೂ ತರಲಾಗಿದ್ದು, ಅವರಿಗೂ ಪ್ರಕರಣದ ವರದಿಯನ್ನು ಶೀಘ್ರವೇ ಒಪ್ಪಿಸಲಾಗುವುದು’’ ಎಂದು ಅವರು ಹೇಳಿದ್ದಾರೆ.
ಕುಂದಾಪುರದ ಮಳೆಯೊಬ್ಬರು ಸೆ. 27ರಂದು ಲೇಡಿಗೋಶನ್ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು, ಆ ಸಂದರ್ಭ ಕುಟುಂಬದವರಿಗೆ ಹೆಣ್ಣು ಮಗು ಎಂದು ಹೇಳಲಾಗಿತ್ತು. ಮಗುವಿನ ಆರೋಗ್ಯದಲ್ಲಿ ಏರುಪೇರಾದ ಕಾರಣ ಮಗುವನ್ನು ಎನ್‌ಎಸ್‌ಐಯುನಲ್ಲಿ ದಾಖಲಿಸಿ ಚಿಕಿತ್ಸೆ ಒದಗಿಸಲಾಗಿತ್ತು. ಆದರೆ ಮಗುವಿನ ಆರೋಗ್ಯದ ಬಗ್ಗೆ ವೈದ್ಯರು ಸ್ಪಷ್ಟ ಮಾಹಿತಿ ನೀಡದ ಕಾರಣ ಮಗುವನ್ನು ನಿನ್ನೆ ಪೋಷಕರು ಬ್ರಹ್ಮಾವರದ ಆಸ್ಪತ್ರೆಗೆ ದಾಖಲಿಸಿದಾಗ ಮಗು ಗಂಡು ಎಂದು ತಿಳಿದು ಬಂದಿತ್ತು. ಈ ಬಗ್ಗೆ ಮತ್ತೆ ಲೇಡಿಗೋಶನ್ ಆಸ್ಪತ್ರೆಗೆ ಆಗಮಿಸಿ ವೈದ್ಯಾಧಿಕಾರಿ ಬಳಿ ಪ್ರಶ್ನಿಸಿದಾಗ ದಾಖಲೆಯಲ್ಲಿ ತಪ್ಪಾಗಿದ್ದಾಗಿ ಒಪ್ಪಿಕೊಂಡಿದ್ದಾಗಿ ಮಗುವಿನ ತಂದೆ ಮುಸ್ತಫಾ ತಿಳಿಸಿದ್ದಾರೆ.
ಈ ಬಗ್ಗೆ ನಗರದ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
‘‘ಯಾವುದೇ ಕಾರಣಕ್ಕೂ ಮಗುವನ್ನು ಬದಲಿಸಲಾಗಿಲ್ಲ. ಮಾತ್ರವಲ್ಲದೆ ಉದ್ದೇಶಪೂರ್ವಕವಾಗಿ ಇದು ನಡೆದಿದ್ದೂ ಅಲ್ಲ. ಮಗುವಿನ ತಾಯಿ ಹೆರಿಗೆಗೆ ಬರುವಾಗ ತೀವ್ರವಾದ ರಕ್ತದೊತ್ತಡವಿತ್ತು. ಹೆರಿಗೆಗೆ ಮತ್ತೆ ಕೆಲ ದಿನಗಳಿದ್ದರೂ ತಾಯಿಯ ಆರೋಗ್ಯದ ಹಿನ್ನೆಲೆಯಲ್ಲಿ, ಈ ಹಿಂದೆಯೂ ಸಿಸೇರಿಯನ್ ಆಗಿದ್ದ ಕಾರಣ ಮತ್ತೆ ಶಸ್ತ್ರ ಚಿಕಿತ್ಸೆ ಮೂಲಕ ಮಗುವಿನ ಹೆರಿಗೆ ಮಾಡಿಸಲಾಯಿತು. ಆ ಸಂದರ್ಭ ಮಗು 1.4 ಕೆಜಿ ತೂಕವಿದ್ದ ಕಾರಣ, ಒಟಿ (ಒಪರೇಶನ್ ಥಿಯೇಟರ್)ಯಲ್ಲಿದ್ದ ಕಾರಣ ಹಾಗೂ ತಾಯಿಯ ಆರೋಗ್ಯದ ಸ್ಥಿತಿಯೂ ಗಂಂಭೀರವಾಗಿದ್ದ ಕಾರಣ ಕರ್ತವ್ಯದಲ್ಲಿದ್ದ ವೈದ್ಯರು ಹಾಗೂ ಸಿಬ್ಬಂದಿ ಮಗುವಿನ ಆರೋಗ್ಯದ ಜತೆಗೆ ತಾಯಿಯ ಆರೋಗ್ಯದ ಬಗ್ಗೆಯೂ ಆಸ್ಪತ್ರೆಯಲ್ಲಿ ಸಂಪೂರ್ಣ ಕಾಳಜಿಯನ್ನು ವಹಿಸುವುದಕ್ಕೆ ಸಿಬ್ಬಂದಿ ಗಮನ ಹರಿಸಿದ್ದಾರೆ. ಒಟಿಯಲ್ಲಿದ್ದ ಮಕ್ಕಳ ತಜ್ಞರು ಮಗುವನ್ನು ಎನ್‌ಐಸಿಯು (ನವಜಾತ ತೀವ್ರ ನಿಗಾ ಘಟಕ) ಗೆ ದಾಖಲು ಮಾಡಿ ಚಿಕಿತ್ಸೆ ನೀಡುವಲ್ಲಿ ಗಮನ ಹರಿಸಿದ್ದಾರೆ. ಮಗುವಿನ ಉಸಿರಾಟದ ತೊಂದರೆ ಬಗ್ಗೆ ಹೆಚ್ಚಿನ ಒತ್ತು ನೀಡಬೇಕಾದ ಒತ್ತಡದ ನಡುವೆ ಕರ್ತವ್ಯದಲ್ಲಿದ್ದ ವೈದ್ಯರು ತಮ್ಮ ಸಹಾಯಕ ವೈದ್ಯರ ಬಳಿ ಮಗುವಿನ ಜನನ ದಾಖಲಾತಿ ನಮೂದಿಸಲು ತಿಳಿಸಿದ್ದಾರೆ. ಆ ಸಂದರ್ಭ ಮಗುವಿನ ಜನನ ದಾಖಲಾತಿ ಪತ್ರದಲ್ಲಿ ಲಿಂಗವನ್ನು ನಮೂದಿಸುವಾಗ ಗಂಡಿನ ಬದಲು ಹೆಣ್ಣೆಂದು ನಮೂದಿಸಲಾಗಿದೆ. ಬರವಣಿಗೆಯಲ್ಲಿ ಆದ ತಪ್ಪಿನಿಂದಾಗಿ ಮಗು ಹಾಗೂ ತಾಯಿಯ ಹೆರಿಗೆಯ ಕಾರ್ಡ್‌ನಲ್ಲೂ ಅದೇ ರೀತಿ ತಪ್ಪು ಮುಂದುವರಿದಿದೆ. ಇದನ್ನು ನಾನು ಒಪ್ಪಿಕೊಳ್ಳುತ್ತೇನೆ. ಇದರಿಂದಾಗಿ ಈ ಗೊಂದಲ ಉಂಟಾಗಿದೆ, ಇದು ಆಗಬಾರದಿತ್ತು. ಈ ಕುರಿತಂತೆ ದಿನ ಕರ್ತವ್ಯದಲ್ಲಿದ್ದ ವೈದ್ಯರು ಹಾಗೂ ಸಿಬ್ಬಂದಿಯನ್ನು ವಿಚಾರಿಸಲಾಗಿದೆ. ವರದಿ ತಯಾರಿಸಲಾಗುತ್ತಿದೆ’’ ಎಂದು ಡಾ. ದುರ್ಗಾ ಪ್ರಸಾದ್ ತಿಳಿಸಿದ್ದಾರೆ.
‘‘ಮಗು ನಿನ್ನೆಯವರೆಗೂ ಲೇಡಿಗೋಶನ್ ಆಸ್ಪತ್ರೆಯ ಎನ್‌ಐಸಿಯುನಲ್ಲೇ ದಾಖಲಾಗಿತ್ತು. ಅಲ್ಲಿ ಸಾಕಷ್ಟು ನವಜಾತ ಶಿಶುಗಳು ಇರುವುದರಿಂದ ಮಗುವಿನ ಕುಟುಂಬದವರಿಗೆ, ಪೋಷಕರಿಗೆ ಅಲ್ಲಿಗೆ ಭೇಟಿ ನೀಡಲು ಅವಕಾಶವನ್ನೂ ನೀಡಲಾಗುವುದಿಲ್ಲ. ಆದರೆ ನಿನ್ನೆ ಮನೆಯವರು ತಾವು ಬೇರೆ ಆಸ್ಪತ್ರೆಗೆ ಕರೆದೊಯ್ಯುವುದಾಗಿ ಹೇಳಿ ತಾಯಿ ಮಗುವನ್ನು ಉಡುಪಿಗೆ ಕರೆದೊಯ್ದಿದ್ದರು. ಮತ್ತೆ ರಾತ್ರಿ ಹಿಂದೆ ಬಂದಿದ್ದರು. ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಮಗುವನ್ನು ಇನ್ನೂ ಕೆಲ ದಿನಗಳ ತೀವ್ರ ನಿಗಾ ಅಗತ್ಯವಿದೆ. ಮತ್ತೆ ಮಗುವನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ. ಇದು ಯಾವುದೇ ರೀತಿಯಲ್ಲಿ ಉದ್ದೇಶಪೂರ್ವಕವಾಗಿ ಆದ ಘಟನೆಯಲ್ಲ. ಮಗುವಿನ ಅಥವಾ ತಾಯಿಯ ಚಿಕಿತ್ಸೆಯ ಕೇಸ್ ಶೀಟ್‌ನಲ್ಲಿ ಆರಂಭದಿಂದಲೂ ಯಾವುದೇ ಬದಲಾವಣೆ ಆಗಿಲ್ಲ. ಹಾಗಾಗಿ ತಾಯಿಯ ಮಗುವನ್ನು ಬದಲಿಸಲಾಗಿದೆ ಎಂಬ ಆರೋಪ ಸರಿಯಲ್ಲ. ಅಂತಹ ಸಾಧ್ಯತೆಯೂ ಇಲ್ಲ. ಆ ಕುರಿತಾದ ಕಾನೂನನ್ನು ನಾವೆಲ್ಲಾ ಅರ್ಥ ಮಾಡಿಕೊಂಡೇ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಅಂತಹ ಅಮಾನವೀಯ ಕೃತ್ಯ ಈ ಆಸ್ಪತ್ರೆಯಲ್ಲಿ ನಡೆದಿಲ್ಲ. ನಡೆಯಲು ಬಿಡುವುದೂ ಇಲ್ಲ. ಈ ಪ್ರಕರಣದಲ್ಲೂ ನಡೆದಿಲ್ಲ ಎಂಬುದನ್ನು ನಾನು ಸ್ಪಷ್ಟಪಡಿಸುತ್ತಿದ್ದೇನೆ’’ ಎಂದು ಡಾ. ದುರ್ಗಾ ಪ್ರಸಾದ್ ತಿಳಿಸಿದ್ದಾರೆ.
‘‘ದಿನವೊಂದಕ್ಕೆ 700ಕ್ಕೂ ಅಧಿಕ ಹೆರಿಗೆಯ ದಾಖಲೆಯನ್ನು ಹೊಂದಿರುವ, ಸುಸಜ್ಜಿತ ನವಜಾತ ತೀವ್ರ ನಿಗಾ ಘಟಕವನ್ನು ಹೊಂದಿರುವ ಈ ಆಸ್ಪತ್ರೆ ಬಗ್ಗೆ ಒಳ್ಳೆಯ ಹೆಸರಿದೆ. ಇಂತಹ ತಪ್ಪುಗಳಿಂದ ಆಸ್ಪತ್ರೆಯ ಗೌರವಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳುವ ಜವಾಬ್ಧಾರಿಯೂ ನಮ್ಮ ಮೇಲಿದೆ. ಈ ಪ್ರಕರಣದಲ್ಲಿಯೂ ಆ ಕುಟುಂಬದ ಮೇಲೆ ಆಗಿರುವ ನೋವಿನ ಬಗ್ಗೆ ಅರಿವಿದೆ. ಅದನ್ನು ಅವರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನದ ಜತೆಗೆ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೂ ಆದೇಶಿಸಲಾಗಿದೆ’’
-ಡಾ. ದುರ್ಗಾ ಪ್ರಸಾದ್, ವೈದ್ಯಕೀಯ ಅಧೀಕ್ಷಕರು, ಲೇಡಿಗೋಶನ್ ಆಸ್ಪತ್ರೆ.
‘‘ಹೆರಿಗೆ ಆದಾಕ್ಷಣ ಲಿಖಿತ ರೂಪದ ದಾಖಲಾತಿ ವೇಳೆ ತಪ್ಪಾಗಿದೆ ಎಂದು ಆಸ್ಪತ್ರೆಯವರು ಹೇಳಿದ್ದಾರೆ. ಆದರೂ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಸೂಚನೆ ನೀಡಿದ್ದೇನೆ. ಮಗುವಿನ ಬಗ್ಗೆ ಗೊಂದಲ ಇದ್ದಾಗ ಅದು ಮಗುವಿನ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಪೋಷಕರಿಗೂ ಮಾನಸಿಕ ಕಿರುಕುಳಕ್ಕೆ ಕಾರಣವಾಗುತ್ತದೆ. ಆಗಿರುವ ತಪ್ಪು ಸಣ್ಣದಲ್ಲ. ಏನೋ ಎಂಟ್ರಿಯಲ್ಲಿ ತಪ್ಪಾಗಿದೆ ಎಂದು ಸಮಜಾಯಿಷಿ ನೀಡಲು ಆಗುವುದಿಲ್ಲ. ಯಾರು ತಪ್ಪು ಮಾಡಿದ್ದಾರೆ, ಅವರು ಸರಕಾರಿ ಅಧಿಕಾರಿಯಾಗಿದ್ದಲ್ಲಿ ಅವರಿಗೆ ನೋಟೀಸು ನೀಡಲು ಹಾಗೂ ಸಂಪೂರ್ಣ ವರದಿ ನೀಡುವಂತೆ ತಿಳಿಸಲಾಗಿದೆ. ಡಿಎನ್‌ಎ ವಿಶ್ಲೇಷಣೆ ಬೇಕಿದ್ದಲ್ಲಿ ಅದನ್ನು ಮಾಡಿಕೊಂಡು ಆಗಿರುವ ತಪ್ಪನ್ನು ಒಪ್ಪಿಕೊಂಡು ಪೋಷಕರಿಗೆ ಆಗಿರುವ ಗೊಂದಲವನ್ನು ನಿವಾರಿಸಲು ಸೂಚಿಸಲಾಗಿದೆ. ಕೆಲಸದ ಒತ್ತಡ ಏನೇ ಇದ್ದರೂ ದಾಖಲಾತಿ ಸಂದರ್ಭದಲ್ಲಿಯೂ ಇಂತಹ ತಪ್ಪುಗಳು ಆಗಬಾರದು’’
ಡಾ. ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ, ದ.ಕ
''ಹೆರಿಗೆ ವೇಳೆ ಹೆಣ್ಣು ಮಗು ಎಂದು ಹೇಳಿ ಅನಾರೋಗ್ಯ ಕಾರಣ ಹೇಳಿ ಡಿಸ್ಚಾರ್ಜ್ ವೇಳೆ ಗಂಡು ಮಗು ನೀಡಿದ ಬಗ್ಗೆ ಮಗು ಅದಲು ಬದಲಾಗಿರುವ ಅನುಮಾನ ವ್ಯಕ್ತಪಡಿಸಿ ಪೋಷಕರು ದೂರು ನೀಡಿದ್ದಾರೆ. ಈ ಬಗ್ಗೆ ಆರೋಗ್ಯ ಇಲಾಖೆ ಸಂಬಂಧಪಟ್ಟ ಡಿಎನ್ಎ ಪರೀಕ್ಷೆ ಸೇರಿದಂತೆ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಿದೆ. ಮಗು ಬದಲಾವಣೆ ಅಗಿದ್ದು ನಿಜ ಎಂದು ಕಂಡು ಬಂದರೆ ಪ್ರಕರಣ ದಾಖಲಿಸಿ, ಕ್ರಮಕೈಗೊಳ್ಳಲು ಅವಕಾಶವಿದೆ''
- ಶಶಿಕುಮಾರ್, ಪೊಲೀಸ್ ಕಮಿಷನರ್, ಮಂಗಳೂರು







