ತ್ರಿಶೂಲ ವಿತರಣೆ ಪ್ರಕರಣ; ಕಾನೂನಿನ ವಿರುದ್ಧವಾಗಿದ್ದರೆ ಕ್ರಮ: ಪೊಲೀಸ್ ಕಮಿಷನರ್ ಶಶಿಕುಮಾರ್

ಪೊಲೀಸ್ ಕಮಿಷನರ್ ಶಶಿಕುಮಾರ್
ಮಂಗಳೂರು, ಅ.15: ತ್ರಿಶೂಲ ವಿತರಣೆಯು ಕಾನೂನಿನ ವಿರುದ್ಧವಾಗಿದ್ದರೆ ಪರಿಶೀಲಿಸಿ ಸೂಕ್ತ ಕ್ರಮ ಜರಗಿಸುವುದಾಗಿ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ನಗರದ ಕದ್ರಿಯ ವಿಶ್ವ ಹಿಂದೂ ಪರಿಷತ್ ಕಚೇರಿಯಲ್ಲಿ ಗುರುವಾರ ನಡೆದ ಆಯುಧ ಪೂಜೆ ಕಾರ್ಯಕ್ರಮದಲ್ಲಿ ವಿಹಿಂಪ ಮುಖಂಡರು ಕಾರ್ಯಕರ್ತರಿಗೆ ತ್ರಿಶೂಲ ವಿತರಿಸಿರುವ ಬಗ್ಗೆ ಆತಂಕ ಮತ್ತು ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಶಶಿಕುಮಾರ್ ಮಂಗಳೂರು ನಗರ ಮತ್ತು ಹೊರವಲಯದ ಹಲವು ಕಡೆ ತ್ರಿಶೂಲ ದೀಕ್ಷೆ ಮಾಡಿದ ಬಗ್ಗೆ ಮಾಹಿತಿ ಲಭಿಸಿದೆ. ಈ ಬಗ್ಗೆ ಪರಿಶೀಲಿಸಿದಾಗ ವರ್ಷಂಪ್ರತಿ ಆಯುಧಪೂಜೆಯ ಸಂದರ್ಭ ಸಾಂಕೇತಿಕವಾಗಿ ತ್ರಿಶೂಲ ದೀಕ್ಷೆ ಮಾಡುತ್ತಿರುವುದಾಗಿ ಆಯೋಜಕರು ತಿಳಿಸಿದ್ದಾರೆ. ಆದಾಗ್ಯೂ ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತ್ರಿಶೂಲ ದೀಕ್ಷೆಯು ಕಾನೂನಿನ ವಿರುದ್ಧವಾಗಿದ್ದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಕಮಿಷನರ್ ಶಶಿಕುಮಾರ್ ಸ್ಪಷ್ಟಪಡಿಸಿದ್ದಾರೆ.
Next Story





