ಶಾಲಾ ಆರಂಭಕ್ಕೆ ಸಿದ್ಧತೆ; ಶಿಕ್ಷಕರಿಗೆ ಶಿಕ್ಷಣ ಇಲಾಖೆಗೆ ಹಿಂತಿರುಗುವಂತೆ ಆದೇಶ

ಬೆಂಗಳೂರು, ಅ.15: ದಸರಾ ಮುಗಿದ ನಂತರ ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಆದುದರಿಂದ ಪ್ರಾಥಮಿಕ ಶಿಕ್ಷಕರನ್ನು ಅನ್ಯ ಇಲಾಖೆಗೆ ನಿಯೋಜನೆ ಮಾಡುವಂತೆ ಹೊರಡಿಸಿದ್ದ ಆದೇಶ ರದ್ದು ಪಡಿಸಲಾಗಿದೆ. ಅಲ್ಲದೇ ವಾರದೊಳಗೆ ಶಿಕ್ಷಣ ಇಲಾಖೆಗೆ ಮರಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಆದೇಶಿಸಿದ್ದಾರೆ.
ಕೊರೋನ ಲಾಕ್‍ಡೌನ್‍ನಿಂದಾಗಿ ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳನ್ನು ಮುಚ್ಚಲಾಗಿತ್ತು. ಈ ಹಿನ್ನೆಲೆಯಲ್ಲಿ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಸಾಕ್ಷರತಾ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಜಿಲ್ಲೆಗಳಲ್ಲಿ ಎಲ್ಲಾ ತಾಲೂಕುಗಳಿಗೆ ಒಬ್ಬರಂತೆ, ಸರಕಾರಿ ತಾಲ್ಲೂಕು ಸಂಯೋಜಕರನ್ನಾಗಿ ನಿಯೋಜನೆ ಮಾಡಿಕೊಳ್ಳಲು ಜಿಲ್ಲಾ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗೆ ಅನುಮತಿ ನೀಡಲಾಗಿತ್ತು. ಅದರಂತೆ ಶಿಕ್ಷಕರನ್ನು ನಿಯೋಜಿಸಲಾಗಿದೆ. ಆದರೆ ಶಿಕ್ಷಕರ ನಿಯೋಜನೆ ಮಾರ್ಚ್ 2021ಕ್ಕೆ ಅಂತ್ಯವಾಗಿತ್ತು. ಕೆಲವು ಶಿಕ್ಷಕರುಗಳನ್ನು ಬೋಧಕೇತರ ಕಾರ್ಯಗಳಿಗೂ ಬೇರೆ ಬೇರೆ ಇಲಾಖೆಗಳಿಗೆ ನಿಯೋಜಿಸಿಕೊಳ್ಳಲಾಗಿತ್ತು. ಈಗ ಶಾಲಾ ಪುನಾರಾಂಭ ಆಗುತ್ತಿರುವುದರಿಂದ ಶಾಲಾ ಶಿಕ್ಷಕರನ್ನು ನಿಯೋಜನೆ ಕಾರ್ಯಗಳಿಂದ ಮುಕ್ತಗೊಳಿಸಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.





