ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕ್ಷಮೆ ಕೇಳಲು ಸಿದ್ಧ: ಎಂ.ಎ.ಸಲೀಂ

ಬೆಂಗಳೂರು, ಅ. 15: `ಮೊನ್ನೆಯ ಘಟನೆಯಿಂದ ನನಗೆ ತೀವ್ರ ಮುಜುಗರವಾಗಿದೆ. ಯಾರಿಗೂ ಮುಖ ತೋರಿಸಲು ನನಗೆ ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ನಾನು ವಿನಮ್ರವಾಗಿ ಮನವಿ ಮಾಡುತ್ತಿದ್ದೇನೆ. ನಾನು ಯಾವುದೇ ರೀತಿ ಪಕ್ಷಕ್ಕಾಗಲೀ ಪಕ್ಷದ ಅಧ್ಯಕ್ಷರ ವರ್ಚಸ್ಸಿಗೆ ಧಕ್ಕೆ ತರುವ ಕಾರ್ಯವಾಗಲೀ ಮಾಡಿಲ್ಲ. ಕೆಪಿಸಿಸಿ ಅಧ್ಯಕ್ಷರ ಕ್ಷಮೆ ಕೇಳಲು ನಾನು ಸಿದ್ಧ' ಎಂದು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆಗೊಂಡ ಮಾಧ್ಯಮ ಸಂಯೋಜಕ ಎಂ.ಎ.ಸಲೀಂ ತಿಳಿಸಿದ್ದಾರೆ.
ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಘಟನೆಯಿಂದ ನಾನು ಶಿವಕುಮಾರ್ ಅವರ ಬಳಿ ತೆರಳಿ ಮುಖ ತೋರಿಸಲು ನನಗೆ ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪರವಾಗಿಯೇ ಕಾರ್ಯ ನಿರ್ವಹಿಸುತ್ತೇನೆ. ನಾನು ಶಿವಕುಮಾರ್ ಅವರ ಧೂಳಿನ ಸಮಾನ. ಶಿಸ್ತು ಸಮಿತಿಗೆ ವರದಿ ಹಿನ್ನೆಲೆ ನನ್ನನ್ನು ಉಚ್ಚಾಟಿಸಲಾಗಿದೆ. ಇಲ್ಲಿ ಬೇರೆ ಯಾವುದೇ ವ್ಯಕ್ತಿಯ ಕೈವಾಡ ಇಲ್ಲ' ಎಂದು ತಿಳಿಸಿದರು.
`ಶಿವಕುಮಾರ್ ಅವರಿಗೆ ನಾನು ಯಾವುದೇ ರೀತಿಯ ಅವಹೇಳನ ಮಾಡಿಲ್ಲ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಸದಾ ಪಕ್ಷಕ್ಕಾಗಿ ದುಡಿಯುತ್ತೇನೆ. ನನ್ನ ಉಚ್ಚಾಟನೆಯನ್ನು ವಾಪಸ್ ಪಡೆಯಬೇಕು ಎಂದು ಶಿಸ್ತು ಸಮಿತಿ ಮುಂದೆ ಮನವಿ ಮಾಡುತ್ತೇನೆ. ಉಮೇಶ್ ವಿಚಾರವಾಗಿ ಮಾಡಿದ ಪ್ರಸ್ತಾಪ ಈ ರೀತಿ ಅಪಾರ್ಥ ಕಲ್ಪಿಸಿದೆ. ನಾನು ಬಿ.ಎಸ್.ಯಡಿಯೂರಪ್ಪ ಪುತ್ರ ವಿಜಯೇಂದ್ರ ವಿಚಾರವಾಗಿ ಪ್ರಸ್ತಾಪ ಮಾಡಿದ್ದೆ. ಆ ಮುಂದುವರಿದ ಭಾಗ ಮಾಧ್ಯಮಗಳಲ್ಲಿ ಪ್ರಸಾರವಾಗಿಲ್ಲ ಎಂದು ಸಲೀಂ ಹೇಳಿದರು.
`ಡಿ.ಕೆ.ಶಿವಕುಮಾರ್ ಅವರ ಮೇಲೆ ಐಟಿ ದಾಳಿ ನಡೆದ ಸಂದರ್ಭ ನಾನು ಅವರ ಪರವಾಗಿ ಹೋರಾಡಿದ್ದೆ. ಆದರೆ, ಈಗ ಅವರೇ ನನ್ನ ಮೇಲೆ ಅನುಮಾನ ಪಡುವ ಸ್ಥಿತಿ ನಿರ್ಮಾಣವಾಗಿದೆ. ನಾನು ನಿಷ್ಠಾವಂತ ಹಾಗೂ ಪ್ರಾಮಾಣಿಕ ಎನ್ನುವುದನ್ನು ಹೇಗಾದರೂ ಸಾಬೀತು ಪಡಿಸುತ್ತೇನೆ. ಅಲ್ಲಿಯವರೆಗೂ ಕಾಂಗ್ರೆಸ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತನಾಗಿ ಮುಂದುವರಿಯುತ್ತೇನೆ. ಸಾಮಾಜಿಕ ಸೇವೆಯಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತೇನೆ' ಎಂದು ಸಲೀಂ ತಿಳಿಸಿದರು.







