ದಸರಾ ಹಬ್ಬದಂದು ರೈತರಿಂದ ವಿಭಿನ್ನ ಪ್ರತಿಭಟನೆ: ಮೋದಿ, ಅಮಿತ್ ಶಾ, ಮೋಹನ್ ಭಾಗವತ್ ಪ್ರತಿಕೃತಿ ದಹನ

ಸಾಂದರ್ಭಿಕ ಚಿತ್ರ
ಜೈಪುರ,ಅ.15: ಕೃಷಿ ಕಾಯ್ದೆಯ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾದ ಕಾರ್ಯಕರ್ತರು ಜೈಪುರದಲ್ಲಿ ದಸರಾ ಹಬ್ಬದ ದಿನವಾದ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ , ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಇತರ ಬಿಜೆಪಿ ನಾಯಕರ ಮುಖಗಳಿರುವ ದಶಕಂಠ ರಾವಣನ ಪ್ರತಿಕೃತಿಯನ್ನು ಹೋಲುವಂತಹ ಪ್ರತಿಕೃತಿಯನ್ನು ದಹಿಸಿದರು.
ಮೋದಿ, ಅಮಿತ್ ಶಾ ಅಲ್ಲದೆ ಆರೆಸ್ಸೆಸ್ ವರಿಷ್ಠ ಮೋಹನ್ ಭಾಗವತ್, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಹರ್ಯಾಣ ಮುಖ್ಯಮಂತರಿ ಮನೋಹರ್ಲಾಲ್ ಖಟ್ಟರ್ ಹಾಗೂ ಉದ್ಯಮಪತಿಗಳಾದ ಮುಖೇಶ್ ಅಂಬಾನಿ ಹಾಗೂ ಗೌತಮ್ ಆದಾನಿಯ ಮುಖದ ಭಾವಚಿತ್ರಗಳನ್ನು ಈ ಪ್ರತಿಕೃತಿಯಲ್ಲಿ ಅಳವಡಿಸಲಾಗಿತ್ತು.
ಈ ಪ್ರತಿಕೃತಿಯಲ್ಲಿ ‘ನಾನು ನರೇಂದ್ರ ದಾಮೋದರ ದಾಸ್ ಮೋದಿ, ನಾನು ರೈತ ವಿರೋಧಿ’ ಎಂಬುದಾಗಿ ಹಿಂದಿಲ್ಲಿ ಬರೆಯಲಾಗಿತ್ತು. ಜೈಪುರದ ಹತ್ರೋಯ್ ಪ್ರದೇಶದ ಸ್ವಾಮಿ ಕುಮಾರನಂದ ಭವನ್ನಿಂದ ಶಹೀದ್ ಸ್ಮಾರಕದ ಸಮೀಪದ ಸರಕಾರಿ ಹಾಸ್ಟೆಲ್ವರೆಗೆ ಪಾದಯಾತ್ರೆ ನಡೆಸಿದ ಎಸ್ಕೆಎಂ ಕಾರ್ಯಕರ್ತರು ಕೇಂದ್ರದ ಕೃಷಿ ಕಾಯ್ದೆ ಹಾಗೂ ಲಖೀಂಪುರ ಹಿಂಸಾಚಾರವನ್ನು ಖಂಡಿಸಿ ಪ್ರಧಾನಿ ಮೋದಿ ಮತ್ತಿತರರ ವಿರುದ್ಧ ಘೋಷಣೆಗಳನ್ನು ಕೂಗಿದರು.
ಕೆಡುಕಿನ ವಿರುದ್ಧ ಒಳಿತಿನ ಗೆಲುವನ್ನು ಸಾರುವ ದಸರಾ ಹಬ್ಬದ ಸಂದೇಶದಂತೆ ನಾವು ಬಿಜೆಪಿ, ಆರೆಸ್ಸೆಸ್, ಪ್ರಧಾನಿ ನರೇಂದ್ರ ಮೋದಿ ಮತ್ತಿತರರನ್ನು ಕೆಡುಕಿನ ಸಂಕೇತವಾಗಿ ಪರಿಗಣಿಸಿ ಅವರ ಪ್ರತಿಕೃತಿಯನ್ನು ದಹಿಸಿದ್ದೇವೆ. ಕೇಂದ್ರ ಸರಕಾರವು ಎಲ್ಲಾ ಪ್ರಜಾತಾಂತ್ರಿಕ ಮೌಲ್ಯಗಳನ್ನು ಮರೆತಿದೆ ಹಾಗೂ ಆಯ್ದ ಕೆಲವು ಉದ್ಯಮಿಗಳಿಗೆ ಲಾಭ ಮಾಡಿಕೊಡಲು ಅದು ಶ್ರಮಿಸುತ್ತಿದೆ ಹಾಗೂ ರೈತರ ವಿರುದ್ಧ ವರ್ತಿಸುತ್ತಿದೆ’’ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ರಾಜಸ್ಥಾನ ಘಟಕದ ಜಂಟಿ ಕಾರ್ಯದರ್ಶಿ ಸಂಜಯ್ ಮಾಧವ್ ಹೇಳಿದ್ದಾರೆ.