ಕಾರ್ಯಕ್ರಮದ ವೇಳೆ ಇರಿತಕ್ಕೊಳಗಾದ ಬ್ರಿಟಿಷ್ ಸಂಸದ ಡೇವಿಸ್ ಅಮೆಸ್ ಮೃತ್ಯು: ದುಷ್ಕರ್ಮಿಯ ಸೆರೆ

photo: twitter
ಲಂಡನ್: ಆಗ್ನೇಯ ಇಂಗ್ಲೆಂಡಿನ ತನ್ನ ಸ್ಥಳೀಯ ಕ್ಷೇತ್ರದಲ್ಲಿ ಶುಕ್ರವಾರ ಚರ್ಚ್ ನಲ್ಲಿ ನಡೆದ ಕಾರ್ಯಕ್ರಮದ ವೇಳೆ "ಹಲವು ಬಾರಿ" ಇರಿತಕ್ಕೊಳಗಾಗಿದ್ದ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರ ಕನ್ಸರ್ವೇಟಿವ್ ಪಕ್ಷದ ಸಂಸದ ಡೇವಿಡ್ ಅಮೆಸ್ ಅವರು ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
69ರ ವಯಸ್ಸಿನ ಡೇವಿಡ್ ಅಮೆಸ್ ಪೂರ್ವ ಇಂಗ್ಲೆಂಡ್ನ ಎಸ್ಸೆಕ್ಸ್ನಲ್ಲಿರುವ ಸೌಥೆಂಡ್ ವೆಸ್ಟ್ನ ಸಂಸತ್ ಸದಸ್ಯರಾಗಿದ್ದು ಲೀ-ಆನ್-ಸೀದಲ್ಲಿನ ಬೆಲ್ಫೇರ್ಸ್ ಮೆಥೋಡಿಸ್ಟ್ ಚರ್ಚ್ನಲ್ಲಿ ನಡೆದ ಸಭೆಯಲ್ಲಿ ಮಧ್ಯರಾತ್ರಿಯ ವೇಳೆಗೆ ದುಷ್ಕರ್ಮಿಯ ಇರಿತಕ್ಕೆ ಗುರಿಯಾಗಿದ್ದರು.
"ಅಮೆಸ್ ಅವರಿಗೆ ತುರ್ತು ಸೇವೆಗಳಿಂದ ಚಿಕಿತ್ಸೆ ನೀಡಲಾಯಿತು. ಆದರೆ, ದುರದೃಷ್ಟವಶಾತ್ ಅವರು ಸ್ಥಳದಲ್ಲೇ ಮೃತಪಟ್ಟರು. ಸ್ಥಳಕ್ಕೆ ಬಂದ ಅಧಿಕಾರಿಗಳು ಕೊಲೆ ಶಂಕೆಯ ಮೇಲೆ 25 ವರ್ಷದ ವ್ಯಕ್ತಿಯನ್ನು ಶೀಘ್ರವಾಗಿ ಬಂಧಿಸಿದರು ಮತ್ತು ಒಂದು ಚಾಕು ಪತ್ತೆಯಾಗಿದೆ”ಎಂದು ಪೊಲೀಸರು ತಿಳಿಸಿದ್ದಾರೆ.
ಅಮೆಸ್ 1983 ರಲ್ಲಿ ಮೊದಲು ಬ್ಯಾಸಿಲ್ಡನ್ ಪ್ರತಿನಿಧಿಯಾಗಿ ಸಂಸತ್ತಿಗೆ ಆಯ್ಕೆಯಾದರು. ನಂತರ 1997 ರಲ್ಲಿ ಸೌಥೆಂಡ್ ವೆಸ್ಟ್ ನಲ್ಲಿ ಚುನಾವಣೆಗೆ ನಿಂತರು.
ಪ್ರತಿ ತಿಂಗಳ ಮೊದಲ ಹಾಗೂ ಮೂರನೇ ಶುಕ್ರವಾರದಂದು ಮತದಾರರೊಂದಿಗೆ ನಿಯಮಿತವಾಗಿ ಸಭೆಗಳನ್ನು ನಡೆಸುತ್ತಿದ್ದ ಅಮೆಸ್ ನಿಧನಕ್ಕೆ ಸಂಸತ್ತಿನ ಸಹೋದ್ಯೋಗಿಗಳು ತಮ್ಮ ಆಘಾತವನ್ನು ವ್ಯಕ್ತಪಡಿಸಿದರು ಹಾಗೂ ಗೌರವ ಸಲ್ಲಿಸಿದರು.







