ಭತ್ತ ಕಟಾವು ಯಂತ್ರಕ್ಕೆ ದರ ನಿಗದಿ ಪಡಿಸಿ; ಉಡುಪಿ ಜಿಲ್ಲಾಧಿಕಾರಿಗೆ ಕಿಸಾನ್ ಕಾಂಗ್ರೆಸ್ ಮನವಿ
ಉಡುಪಿ, ಅ.15: ಉಡುಪಿ ಜಿಲ್ಲೆಯಲ್ಲಿ ಭತ್ತದ ಗದ್ದೆಗಳು ಕಟಾವಿಗೆ ಬಂದಿದ್ದು ಈಗಾಗಲೇ ಹೊರ ರಾಜ್ಯಗಳಿಂದ ಕಟಾವು ಯಂತ್ರ ಗಳು ಬಂದಿವೆ. ಆದರೆ ಈ ಕಟಾವು ಯಂತ್ರದ ಮಾಲಕರು ದುಬಾರಿ ದರಗಳನ್ನು ರೈತರಿಂದ ಪಡೆಯುತ್ತಿ ರುವುದು ಕಂಡುಬಂದಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಜಿಲ್ಲೆಯ ರೈತರಿಗೆ ಕಟಾವು ಯಂತ್ರದ ದರವನ್ನು ನಿಗದಿಪಡಿಸಿ ಅವರ ಶೋಷಣೆ ಯನ್ನು ತಡೆಯುವಂತೆ ಉಡುಪಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಜಿಲ್ಲಾಧಿಕಾರಿ ಕೂರ್ಮಾ ರಾವ್ ಅವರಿಗೆ ಮನವಿ ಮಾಡಿದೆ.
ತಮಿಳುನಾಡಿನಲ್ಲಿ ಕಟಾವು ಯಂತ್ರಕ್ಕೆ ಗಂಟೆಗೆ 800 ರೂ. ಪಡೆಯುತಿದ್ದರೆ, ಇಲ್ಲಿ ನಮ್ಮ ರೈತರಿಂದ 2,500 ರೂ. ತನಕ ಹಣ ಪಡೆಯುತ್ತಿರುವುದು ನಮ್ಮ ರೈತರ ಶೋಷಣೆಯಾಗಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಜಿಲ್ಲೆಯ ರೈತರಿಗೆ ಕಟಾವು ಯಂತ್ರಕ್ಕೆ ಸಾಮೂಹಿಕ ದರವನ್ನು ನಿರ್ಣಯ ಮಾಡಿ ಪ್ರಕಟಿಸಬೇಕೆಂದು ಕಿಸಾನ್ ಕಾಂಗ್ರೆಸ್ ಮನವಿಯಲ್ಲಿ ತಿಳಿಸಿದೆ.
ಉಡುಪಿ ಜಿಲ್ಲೆಯಲ್ಲಿ ಈ ಯಂತ್ರಗಳ ಮಾಲಕರು ಬೇರೆ ಬೇರೆ ಗ್ರಾಮಗಳಲ್ಲಿ ಬೇರೆ ಬೇರೆ ರೀತಿಯ ದರಗಳನ್ನು ಪಡೆಯುತ್ತಿದ್ದು, ಇದರಿಂದ ರೈತರಿಗೆ ತುಂಬಾ ನಷ್ಟವಾಗುತ್ತಿದೆ. ಈಗಾಗಲೇ ಅಕಾಲಿಕ ಮಳೆಯಿಂದ ತೊಂದರೆ ಅನುಭವಿಸುತ್ತಿ ರುವ ರೈತರ ಮೇಲೆ ಈ ಯಂತ್ರಗಳ ದುಬಾರಿ ವೆಚ್ಚವು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಕೂಡಲೇ ಕಟಾವು ಯಂತ್ರಗಳಿಗೆ ದರವನ್ನು ನಿಗದಿ ಪಡಿಸಬೇಕೆಂದು ಉಡುಪಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಎಲ್ಲೂರು ಶಶಿಧರ್ ಶೆಟ್ಟಿ ಮನವಿಯಲ್ಲಿ ಒತ್ತಾಯಿಸಿದ್ದಾರೆ.







