ಮನಮೋಹನ್ ಸಿಂಗ್ ದೇಹಸ್ಥಿತಿ ಸ್ಥಿರ

ಹೊಸದಿಲ್ಲಿ, ಅ.15: ಅಸ್ವಸ್ಥತೆಯ ಕಾರಣದಿಂದಾಗಿ ಇಲ್ಲಿನ ಏಮ್ಸ್ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ದೇಹಸ್ಥಿತಿ ಸ್ಥಿರವಾಗಿದ್ದು, ಸುಧಾರಿಸುತ್ತಿದೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಜ್ವರದಿಂದ ಬಳಲುತ್ತಿದ್ದ ಮನಮೋಹನ್ ಸಿಂಗ್ ಅವರಲ್ಲಿ ನಿಶ್ಯಕ್ತಿ ಕಾಣಿಸಿಕೊಂಡಿದ್ದರಿಂದ ಅವರನ್ನು ಬುಧವಾರ ಹೊಸದಿಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. 89 ವರ್ಷದ ಮನಮೋಹನ್ ಸಿಂಗ್ ಅವರನ್ನು ಆಸ್ಪತ್ರೆಯ ಹೃದ್ರೋಗ-ನರವಿಜ್ಞಾನ ಕೇಂದ್ರದ ಖಾಸಗಿ ವಾರ್ಡ್ ನಲ್ಲಿ ದಾಖಲಿಸಲಾಗಿದೆ. ಡಾ. ನಿತೀಶ್ ನಾಯ್ಕೋ ನೇತೃತ್ವದ ಹೃದ್ರೋಗತಜ್ಞರ ತಂಡವೊಂದು ಅವರಿಗೆ ಚಿಕಿತ್ಸೆ ನೀಡುತ್ತಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ಸಂಜೆ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಿ, ಆವರ ಆರೋಗ್ಯದ ಬಗ್ಗೆ ವಿಚಾರಿಸಿದರು. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯ ಕೂಡಾ ಗುರುವಾರ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಿ, ಆರೋಗ್ಯದ ಬಗ್ಗೆ ವಿಚಾರಿಸಿದರು ಎಂದು ಏಮ್ಸ್ ಮೂಲಗಳು ತಿಳಿಸಿವೆ.