ಲಖಿಂಪುರ ಖೇರಿ ಹಿಂಸಾಚಾರದಿಂದ ಗಮನ ಬೇರೆಡೆ ಸೆಳೆಯಲು ಆರ್ಯನ್ ಖಾನ್ ಪ್ರಕರಣ: ಕಪಿಲ್ ಸಿಬಲ್
ಹೊಸದಿಲ್ಲಿ, ಅ. 15: ಆರ್ಯನ್ ಖಾನ್ ಮಾದಕ ದ್ರವ್ಯ ಪ್ರಕರಣದ ಮೂಲಕ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ಮೇಲಿನ ಗಮನವನ್ನು ಬೇರೆಡೆಗೆ ತಿರುಗಿಸಲಾಗಿದೆ ಎಂದು ಕಾಂಗ್ರೆಸ್ನ ಹಿರಿಯ ನಾಯಕ ಕಪಿಲ್ ಸಿಬಲ್ ಶುಕ್ರವಾರ ಹೇಳಿದ್ದಾರೆ. ಗುರುವಾರ ನಡೆದ ವಿಚಾರಣೆಯಲ್ಲಿ ನ್ಯಾಯಾಲಯ ತನ್ನ ಆದೇಶವನ್ನು ಅಕ್ಟೋಬರ್ 20ಕ್ಕೆ ಕಾಯ್ದಿರಿಸಿದ ಬಳಿಕ ಕಪಿಲ್ ಸಿಬಲ್ ಈ ಟ್ವೀಟ್ ಮಾಡಿದ್ದಾರೆ.
ಮಾದಕ ದ್ರವ್ಯ ಸೇವಿಸಿದ ಹಾಗೂ ಮಾದಕ ದ್ರವ್ಯ ವಶದಲ್ಲಿದ್ದ ಬಗ್ಗೆ ಯಾವುದೇ ಸಾಕ್ಷ್ಯ ಇಲ್ಲದೇ ಇರುವ ಪ್ರಕರಣವನ್ನು ತನಿಖೆ ನಡೆಸುವ ಹೊಸ ತನಿಖಾ ವ್ಯವಸ್ಥೆ ಇದಾಗಿದೆ ಎಂದು ಕಪಿಲ್ ಸಿಬಲ್ ತಿಳಿಸಿದರು. ಅತಿ ದೊಡ್ಡ ಕಾರ್ಯಸೂಚಿಯಿಂದ ಆರ್ಯನ್ ಖಾನ್ ಅವರಿಗೆ ತೀವ್ರ ಹಾನಿಯಾಗಿರುವುದು ದುರಾದೃಷ್ಟಕರ. ಯುವಕನೋರ್ವ ಇಂತಹ ಪರಿಸ್ಥಿತಿಯಲ್ಲಿ ಸಿಲುಕಿರುವುದು ವಿಷಾದಕರ ಎಂದು ಅವರು ಹೇಳಿದ್ದಾರೆ. ಗೋವಾಕ್ಕೆ ತೆರಳುತ್ತಿದ್ದ ಪ್ರಯಾಣಿಕರ ಹಡಗಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಯ ಮೇಲೆ ದಾಳಿ ನಡೆಸಿದ ಬಳಿಕ ಅಕ್ಟೋಬರ್ 3ರಂದು ಎನ್ಸಿಬಿ ಆರ್ಯನ್ ಖಾನ್ ಅವರನ್ನು ಬಂಧಿಸಿತ್ತು. ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು.