ಸಿಬಿಎಸ್ಇ: 10, 12ನೇ ತರಗತಿಗೆ ನವೆಂಬರ್-ಡಿಸೆಂಬರ್ನಲ್ಲಿ ಭೌತಿಕ ಪರೀಕ್ಷೆ

ಹೊಸದಿಲ್ಲಿ, ಅ. 15: 10 ಹಾಗೂ 12ನೇ ತರಗತಿಯ ಮೊದಲ ಅವಧಿಯ ಮಂಡಳಿ ಪರೀಕ್ಷೆ ನವೆಂಬರ್-ಡಿಸೆಂಬರ್ನಲ್ಲಿ ಭೌತಿಕವಾಗಿ ನಡೆಸಲಾಗುವುದು. ವೇಳಾಪಟ್ಟಿಯನ್ನು ಅಕ್ಟೋಬರ್ 18ರಂದು ಪ್ರಕಟಿಸಲಾಗುವುದು ಎಂದು ಸಿಬಿಎಸ್ಇ ಗುರುವಾರ ಹೇಳಿದೆ. ಪರೀಕ್ಷೆ ಆಯ್ಕೆಯ ಮಾದರಿಯಲ್ಲಿ ಇರಲಿದೆ. ಪರೀಕ್ಷೆಯ ಕಾಲಾವಧಿ 90 ನಿಮಿಷ. ಚಳಿಗಾಲವನ್ನು ಗಮನದಲ್ಲಿ ಇರಿಸಿಕೊಂಡು ಪರೀಕ್ಷೆ ಪೂರ್ವಾಹ್ನ 10.30ಕ್ಕೆ ಆರಂಭವಾಗುವ ಬದಲು 11.30ಕ್ಕೆ ಆರಂಭವಾಗಲಿದೆ. ಶೈಕ್ಷಣಿಕ ಅವಧಿಯನ್ನು ವಿಭಾಗಿಸಿ ಎರಡು ಅವಧಿಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗುವುದು.
ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಸಿಬಿಎಸ್ಇ ಜುಲೈಯಲ್ಲಿ ಘೋಷಿಸಿದ 2021-22ರ 10 ಹಾಗೂ 12ನೇ ತರಗತಿ ಪರೀಕ್ಷೆಯ ವಿಶೇಷ ಮೌಲ್ಯಮಾಪನ ಯೋಜನೆ ಭಾಗ ಇದಾಗಿದೆ. ‘‘ಮೊದಲ ಅವಧಿಯ ಪರೀಕ್ಷೆ ನಡೆಸಿದೆ ಬಳಿಕ, ಪಡೆದ ಅಂಕವನ್ನು ಫಲಿತಾಂಶದ ರೀತಿಯಲ್ಲಿ ಪ್ರಕಟಿಸಲಾಗುವುದು. ಯಾವೊಬ್ಬ ವಿದ್ಯಾರ್ಥಿಯನ್ನು ಉತ್ತೀರ್ಣ, ಕಂಪಾರ್ಟ್ಮೆಂಟ್ ಪರೀಕ್ಷೆ, ಅಗತ್ಯದ ಪುನರಾವರ್ತಿತ ವರ್ಗದಲ್ಲಿ ಗುರುತಿಸಲಾಗುವುದಿಲ್ಲ. ಮೊದಲ ಹಾಗೂ ಎರಡನೇ ಅವಧಿಯ ಪರೀಕ್ಷೆ ಪೂರ್ಣಗೊಂಡ ಬಳಿಕ ಅಂತಿಮ ಫಲಿತಾಂಶ ಘೋಷಿಸಲಾಗುವುದು’’ ಎಂದು ಸಿಬಿಎಸ್ಇ ಪರೀಕ್ಷಾ ನಿಯಂತ್ರಕ ಸನ್ಯಾಮ್ ಭಾರದ್ವಾಜ್ ಅವರು ಹೇಳಿದ್ದಾರೆ.
ಮೊದಲ ಅವಧಿಯ ಪರೀಕ್ಷೆ ಮುಗಿಯುವ ಮುನ್ನ ಪ್ರಾಯೋಗಿಕ ಪರೀಕ್ಷೆ ಅಥವಾ ಆಂತರಿಕ ವೌಲ್ಯ ಮಾಪನ ಪೂರ್ಣಗೊಳಿಸಲಾಗುವುದು. ಒಟ್ಟು ಅಂಕದಲ್ಲಿ ಈ ಅವಧಿ ಪರೀಕ್ಷೆಗೆ ಶೇ. 50 ಅಂಕ ನೀಡಲಾಗುವುದು. ಶಾಲೆಗಳಿಗೆ ಪೂರ್ಣ ಯೋಜನೆ ಬಗ್ಗೆ ಪ್ರತ್ಯೇಕವಾಗಿ ಮಾಹಿತಿ ನೀಡಲಾಗುವುದು. ಆದುದರಿಂದ ಅವರಿಗೆ ಅಗತ್ಯವಿರುವ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು. ಎರಡನೇ ಅವಧಿಯ ಪರೀಕ್ಷೆಯನ್ನು 2022 ಮಾರ್ಚ್-ಎಪ್ರಿಲ್ನಲ್ಲಿ ನಡೆಸಲಾಗುವುದು. ದೇಶದ ಕೋವಿಡ್ ಪರಿಸ್ಥಿತಿ ಅವಲಂಬಿಸಿ ಆಯ್ಕೆಯ ಮಾದರಿ ಅಥವಾ ವಿವರಣೆಯ ಮಾದರಿಯನ್ನು ನಿರ್ಧರಿಸಲಾಗುವುದು ಎಂದು ಸನ್ಯಾಮ್ ಭಾರದ್ವಾಜ್ ಹೇಳಿದರು.