ಮುಂಬೈ ಡ್ರಗ್ಸ್ ಪ್ರಕರಣದ ತನಿಖಾಧಿಕಾರಿಯ ವಿರುದ್ಧ ಮಹಾರಾಷ್ಟ್ರ ಸಚಿವ ಮಲಿಕ್ ವಾಗ್ದಾಳಿ
ತಮ್ಮ ಪರಿಚಯಸ್ಥರನ್ನು ಕೆಲವು ಪ್ರಕರಣಗಳಲ್ಲಿ ಸಾಕ್ಷಿಗಳನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಿರುವ ಎನ್ಸಿಬಿ ಅಧಿಕಾರಿಗಳು

ಮುಂಬೈ: ಮೆಗಾಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಈ ತಿಂಗಳ ಆರಂಭದಲ್ಲಿ ಡ್ರಗ್ಸ್ ಆನ್ ಕ್ರೂಸ್ ಪ್ರಕರಣದಲ್ಲಿ ಬಂಧಿಸಿ ತನಿಖೆ ನಡೆಸುತ್ತಿರುವ ನಡುವೆಯೇ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಇಂದು ಡ್ರಗ್ಸ್ ವಿರೋಧಿ ಏಜೆನ್ಸಿ ಎನ್ ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ವಿರುದ್ಧ ವಾಗ್ದಾಳಿ ಮುಂದುವರಿಸಿದರು. ಸಚಿವರು ಪ್ರಕರಣದ ಪ್ರಮುಖ ತನಿಖಾಧಿಕಾರಿಯಾದ ಸಮೀರ್ ವಾಂಖೇಡೆಯನ್ನು ತರಾಟೆಗೆ ತೆಗೆದುಕೊಂಡರು.
ಎನ್‌ಸಿಬಿ ಅಧಿಕಾರಿಗಳು ತಮ್ಮ ಪರಿಚಯಸ್ಥರನ್ನು ಕೆಲವು ಪ್ರಕರಣಗಳಲ್ಲಿ ಸಾಕ್ಷಿಗಳನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ 62 ರ ವಯಸ್ಸಿನ ಮಲಿಕ್ ಇಂದು ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
"ಈ ಚಿತ್ರದಲ್ಲಿ ಕಾಣುವ ವ್ಯಕ್ತಿ ಫ್ಲೆಚರ್ ಪಟೇಲ್ ಹಾಗೂ ಪಟೇಲ್ ಅವರು ಎನ್ಸಿಬಿ ಅಧಿಕಾರಿ ಸಮೀರ್ ಅವರ ಸಹೋದರಿ ಜಾಸ್ಮಿನ್ ವಾಂಖೆಡೆ ಅವರೊಂದಿಗೆ ಇರುವ ಚಿತ್ರ ಇಲ್ಲಿದೆ’’ ಎಂದು ಸುದ್ದಿಗಾರರಿಗೆ ಮಲಿಕ್ ತಿಳಿಸಿದರು.
ಆರ್ಯನ್ ಖಾನ್ ಪ್ರಕರಣದ ತನಿಖೆ ನಡೆಸುತ್ತಿರುವ ವಾಂಖೆಡೆ ಅವರ ಮತ್ತೊಂದು ಚಿತ್ರವನ್ನು ಹಂಚಿಕೊಂಡ ಮಲಿಕ್ ಪಟೇಲ್ ಹಾಗೂ ವಾಂಖೆಡೆ ಪರಸ್ಪರ ಚೆನ್ನಾಗಿ ತಿಳಿದಿದ್ದಾರೆ ಎಂದು ಹೇಳಿದರು.
"ಪ್ರಶ್ನೆಯೆಂದರೆ ಎನ್‌ಸಿಬಿ ಅಧಿಕಾರಿಗಳು ತಮ್ಮ ಪರಿಚಯಸ್ಥರನ್ನು ಪ್ರಕರಣದಲ್ಲಿ ಹೇಗೆ ಸಾಕ್ಷಿಯಾಗಿಸಬಹುದು?" ಎಂದು ಎನ್‌ಸಿಪಿ ನಾಯಕ ಪ್ರಶ್ನಿಸಿದರು. ಅವರು ಸರಣಿ ಟ್ವೀಟ್‌ಗಳ ಮೂಲಕ ಆರೋಪಗಳನ್ನು ಪುನರಾವರ್ತಿಸಿದರು