ಕಟ್ಟಡದ ಹಸಿತ್ಯಾಜ್ಯ ಸ್ಥಳದಲ್ಲೇ ಸಂಸ್ಕರಿಸಲು ಮನಪಾ ಸೂಚನೆ
ನ.1ರಿಂದ ದಂಡ ಸಹಿತ ತ್ಯಾಜ್ಯ ಸಂಗ್ರಹ
ಮಂಗಳೂರು, ಅ.16: ಮಂಗಳೂರು ಮಹಾನಗರ ಪಾಲಿಕೆಯು 30ಕ್ಕಿಂತ ಹೆಚ್ಚು ಮನೆ/ಫ್ಲಾಟ್ ಹೊಂದಿರುವ ಅಪಾರ್ಟ್ ಮೆಂಟ್‌ಗಳಲ್ಲಿ ಮತ್ತು ಇತರ ದೊಡ್ಡ ಸಂಸ್ಥೆಗಳಾದ ಹೊಟೇಲ್, ಆಸ್ಪತ್ರೆ, ಲಾಡ್ಜ್, ಕಲ್ಯಾಣ ಮಂಟಪ, ಕೆಟರಿಂಗ್ ಇತ್ಯಾದಿ ಸ್ವಂತ ತ್ಯಾಜ್ಯ ಸಂಸ್ಕರಣ ಕಾಂಪೋಸ್ಟಿಂಗ್ ಘಟಕವನ್ನು ಕಡ್ಡಾಯವಾಗಿ ನಿರ್ಮಿಸಿ, ಸಂಸ್ಕರಣೆ ಮಾಡಲು ಪಾಲಿಕೆ ಸೂಚಿಸಿದೆ. ನ.1ರಿಂದ ದಂಡ ವಸೂಲಾತಿಯ ಜೊತೆಗೆ ತ್ಯಾಜ್ಯ ಸಂಗ್ರಹಿಸಲು ಪಾಲಿಕೆ ನಿರ್ಧರಿಸಿದೆ.
ಮಂಗಳೂರು ಮಹಾನಗರ ಪಾಲಿಕೆಯ ಘನತ್ಯಾಜ್ಯ ನಿರ್ವಹಣೆಯ ಕುರಿತಾಗಿ ಹೈಕೋರ್ಟ್‌ನಲ್ಲಿ ದಾಖಲಾದ ರಿಟ್ ಅರ್ಜಿಯು ವಿಚಾರಣೆ ಹಂತದಲ್ಲಿದ್ದು, ಘನತ್ಯಾಜ್ಯ ನಿಯಮಗಳ ಅನುಷ್ಟಾನದ ನಿಟ್ಟಿನಲ್ಲಿ ಸಾಧಿಸಿರುವ ಪ್ರಗತಿಯು ಸರಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆ. ತ್ಯಾಜ್ಯ ನಿರ್ವಹಣೆ ಚಟುವಟಿಕೆಯನ್ನು ಕಾಲಮಿತಿಯೊಳಗೆ ಅನುಷ್ಟಾನಗೊಳಿಸುವ ಅಗತ್ಯವಿದೆ.
ಸಂಬಂಧಪಟ್ಟ ಎಲ್ಲ ಸಂಸ್ಥೆಗಳು ತಮ್ಮ ಕಟ್ಟಡಗಳಲ್ಲಿ ಉತ್ಪತ್ತಿಯಾಗುವ ಹಸಿತ್ಯಾಜ್ಯವನ್ನು ಸ್ಥಳದಲ್ಲಿಯೇ ಸಂಸ್ಕರಣೆ ಮಾಡಲು ಇದೇ ಅ.31 ಕೊನೆಯ ದಿನವಾಗಿದೆ. ತ್ಯಾಜ್ಯ ಸಂಸ್ಕರಣ ಕಾಂಪೋಸ್ಟಿಂಗ್ ಘಟಕವನ್ನು ನಿರ್ಮಿಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರೂ ಪ್ರಯೋಜನವಾಗಿಲ್ಲ. ಇದನ್ನು ಪಾಲಿಕೆಯು ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರಿಗೆ ಇದೇ ನ.1ರಿಂದ ಅನ್ವಯಿಸುವಂತೆ ಪ್ರತಿದಿನ ದಂಡ ವಿಧಿಸಿ ತ್ಯಾಜ್ಯ ಸಂಗ್ರಹಿಸಲು ಪಾಲಿಕೆ ಮುಂದಾಗಿದೆ.
ತ್ಯಾಜ್ಯ ಸಂಸ್ಕರಣ ಕಾಂಪೋಸ್ಟಿಂಗ್ ಘಟಕವನ್ನು ಸ್ಥಾಪಿಸಲು ವಿಫಲವಾದ ಅಪಾರ್ಟ್‌ಮೆಂಟ್‌ನವರು ಮೊದಲ ತಿಂಗಳಿಗೆ ಪ್ರತಿದಿನ ಪ್ರತಿ ಫ್ಲಾಟ್‌ಗೆ 15 ರೂ.ನಂತೆ ಒಂದು ತಿಂಗಳ ಪೂರ್ಣ ಮೊತ್ತವನ್ನು ಮುಂಗಡವಾಗಿ ಪಾವತಿಸಿ, ತ್ಯಾಜ್ಯ ಸಂಗ್ರಹಕಾರರ ವಾಹನದ ಚಾಲಕರಿಗೆ ಚಲನ್ ಹಾಜರು ಪಡಿಸಿ ತ್ಯಾಜ್ಯ ನೀಡಬೇಕು.
ಒಂದು ತಿಂಗಳ ನಂತರ ಎರಡನೆಯ ಮಾಹೆಯಿಂದ ಪ್ರತಿದಿನ ಪ್ರತಿ ಫ್ಲ್ಯಾಟ್‌ಗೆ 25 ರೂ.ನಂತೆ ಒಂದು ತಿಂಗಳ ಪೂರ್ಣ ಮೊತ್ತವನ್ನು ಮುಂಗಡವಾಗಿ ಪಾವತಿಸಬೇಕು. ತಪ್ಪಿದಲ್ಲಿ ಸ್ಥಳದಲ್ಲಿಯೇ ತ್ಯಾಜ್ಯವನ್ನು ತಿರಸ್ಕರಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಹಣ ಪಾವತಿಸಲು, ಪಾಲಿಕೆಯ ಆರೋಗ್ಯ ವಿಭಾಗದಿಂದ ಚಲನ್ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ಪಾಲಿಕೆಯ ಸಹಾಯವಾಣಿ ಸಂಖ್ಯೆ 0824-220310 (318)ಗೆ ಕರೆ ಮಾಡಬಹುದು ಎಂದು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







