ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣ: ಆರೋಪಿ ಅಂಕಿತ್ ದಾಸ್ ಮನೆಯಿಂದ ಶಸ್ತ್ರಾಸ್ತ್ರ ವಶ

ಲಕ್ನೋ: ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗನಿಗೆ ಸೇರಿದ ಜೀಪು ಅಕ್ಟೋಬರ್ 3ರಂದು ಲಖಿಂಪುರ ಖೇರಿಯಲ್ಲಿ ಪ್ರತಿಭಟನಾಕಾರ ರೈತರ ಮೇಲೆ ಹರಿದು ಸಂಭವಿಸಿದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಆರೋಪಿ ಅಂಕಿತ್ ದಾಸ್ ಮನೆಯಿಂದ ಒಂದು ಪಿಸ್ತೂಲ್ ಹಾಗೂ ಬಂದೂಕನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ರವಿವಾರ ವಶಪಡಿಸಿಕೊಂಡಿದೆ.
ಪಿಸ್ತೂಲ್ ಅಂಕತ್‌ದಾಸ್ ಹೆಸರಿನಲ್ಲೇ ನೋಂದಣಿಯಾಗಿದ್ದರೆ, ಬಂದೂಕಿನ ಲೈಸನ್ಸ್ ಆರೋಪಿಯ ಅಂಗರಕ್ಷಕ ಲತೀಫ್ ಹೆಸರಿನಲ್ಲಿದೆ. ಬಂದೂಕು ಹಾಗೂ ಪಿಸ್ತೂಲ್ ವಶಪಡಿಸಿಕೊಳ್ಳುವ ಸಲುವಾಗಿ ಇಬ್ಬರೂ ಆರೋಪಿಗಳನ್ನು ಎಸ್‌ಐಟಿ ತಂಡ ಲಕ್ನೋಗೆ ಕರೆತಂದಿತ್ತು. ಅಕ್ಟೋಬರ್ 3ರಂದು ನಡೆದ ಘಟನೆ ಸಂದರ್ಭದಲ್ಲಿ ಇಬ್ಬರೂ ಈ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು ಎನ್ನಲಾಗಿದೆ.
ಅಕ್ಟೋಬರ್ 3ರ ಘಟನೆ ಬಳಿಕ ಇಬ್ಬರು ಆರೋಪಿಗಳು ತಂಗಿದ್ದರು ಎನ್ನಲಾದ ಗೋಮತಿನಗರ ಹೋಟೆಲ್‌ಗೆ ಆರೋಪಿಗಳನ್ನು ಕರೆದೊಯ್ದು ವಿಚಾರಣೆ ನಡೆಸಲಾಯಿತು. ಹೋಟೆಲ್‌ನ ಡಿಜಿಟಲ್ ವೀಡಿಯೊ ರೆಕಾರ್ಡರ್ ಅನ್ನು ತಂಡ ಖೇರಿಗೆ ಒಯ್ದಿದೆ ಎಂದು ಉನ್ನತ ಮೂಲಗಳು ಹೇಳಿವೆ. ಬಂಧಿತ ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿ ರವಿವಾರ ಮುಕ್ತಾಯವಾಗಲಿದೆ.
ಹಿಂಸಾಚಾರ ನಡೆದ ದಿನದಂದು ಪಿಸ್ತೂಲ್ ಹಾಗೂ ಬಂದೂಕು ಬಳಕೆಯಾಗಿದೆಯೇ ಎನ್ನುವುದನ್ನು ಸಿಡಿಮದ್ದು ತಜ್ಞರು ಪರಿಶೀಲಿಸಲಿದ್ದಾರೆ ಎಂದು ತನಿಖೆಯ ನೇತೃತ್ವ ವಹಿಸಿರುವ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ. ಅಂಕಿತ್ ದಾಸ್ ಮುಖ್ಯ ಆರೋಪಿ ಆಶೀಶ್ ಮಿಶ್ರಾನ ನಿಕಟವರ್ತಿಯಾಗಿದ್ದು, ಘಟನೆ ನಡೆದ ದಿನದಂದು ಒಂದು ಎಸ್‌ಯುವಿಯಲ್ಲಿ ಇದ್ದ ಎನ್ನಲಾಗಿದೆ.