ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಮಹಿಳೆಯ ಹಿಜಾಬ್ ತೆಗೆಸಿದ ಘಟನೆಗೆ ಆಕ್ರೋಶ

ಭೋಪಾಲ್ : ಸ್ಕೂಟರ್‌ನಲ್ಲಿ ಪುರುಷರೊಬ್ಬರ ಜತೆಗೆ ಹಿಂಬದಿ ಸವಾರರಾಗಿ ತೆರಳುತ್ತಿದ್ದ ಮಹಿಳೆಯನ್ನು ಬಲವಂತವಾಗಿ ತಡೆದು ಹಿಜಾಬ್ ತೆಗೆಸಿದ ಅಮಾನವೀಯ ಘಟನೆ ಭೋಪಾಲ್‌ನಲ್ಲಿ ಶನಿವಾರ ನಡೆದಿದ್ದು, ಘಟನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ, ಟೀಕೆ ವ್ಯಕ್ತವಾಗಿದೆ.
ಭೋಪಾಲ್‌ನ ಇಸ್ಲಾಂ ನಗರದ ಅಗಲ ಕಿರಿದಾದ ಬೀದಿಯಲ್ಲಿ ಪುರುಷರೊಬ್ಬರ ಜತೆಗೆ ಹಿಂಬದಿ ಸವಾರರಾಗಿ ತೆರಳುತ್ತಿದ್ದ ಮಹಿಳೆಯನ್ನು ತಡೆದು ಮಹಿಳೆ ಧರಿಸಿದ್ದ ಹಿಜಾಬ್ ತೆಗೆಯಲು ಸೂಚಿಸಲಾಯಿತು. ಇದಕ್ಕೆ ಮಹಿಳೆ ಪ್ರತಿಭಟಿಸಿದಾಗ ಕೆಲ ಮಂದಿ ಬಲವಂತವಾಗಿ ಹಿಜಾಬ್ ತೆಗೆಯುತ್ತಿರುವ ಹಾಗೂ ಮಹಿಳೆ ಅಕ್ಷರಶಃ ಅಳುತ್ತಿರುವ ದೃಶ್ಯದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
"ನೀನು ಇಡೀ ಸಮುದಾಯಕ್ಕೆ ಅವಮಾನ" ಎಂದು ವ್ಯಕ್ತಿಯೊಬ್ಬ ಮಹಿಳೆಯನ್ನು ನಿಂದಿಸುತ್ತಿರುವ ದೃಶ್ಯ ಕೂಡಾ ದಾಖಲಾಗಿದೆ. ಮಹಿಳೆ ಹಿಂದೂ ವ್ಯಕ್ತಿಯ ಜತೆ ತೆರಳುತ್ತಿದ್ದಾಳೆ ಎಂಬ ಅನುಮಾನದಿಂದ ಗುಂಪೊಂದು ಸ್ಕೂಟರ್ ತಡೆಯಿತು ಎಂದು ಪೊಲೀಸರು ಹೇಳಿದ್ದಾರೆ. ಈ ಘಟನೆ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ವೀಡಿಯೊದಲ್ಲಿ ಸ್ಕೂಟರ್ ತಡೆಯುತ್ತಿರುವ ಇಬ್ಬರನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಿ ವಾಪಾಸು ಕಳುಹಿಸಲಾಗಿದೆ.
"ಒಬ್ಬ ಪುರುಷ ಹಾಗೂ ಮಹಿಳೆ ಶನಿವಾರ ಮಧ್ಯಾಹ್ನ ಇಸ್ಲಾಂ ನಗರಕ್ಕೆ ಆಗಮಿಸಿದರು. ಕೆಲ ವ್ಯಕ್ತಿಗಳು ಅವರನ್ನು ತಡೆದು ಮಹಿಳೆಯ ಹಿಜಾಬ್ ತೆಗೆಯಲು ಬಲವಂತಪಡಿಸಿದರು. ಪುರುಷ ಹಿಂದೂ ಹಾಗೂ ಮಹಿಳೆ ಮುಸ್ಲಿಂ ಎಂಬ ಅನುಮಾನದಿಂದ ಸ್ಕೂಟರ್ ತಡೆಯಲಾಯಿತು" ಎಂದು ಪೊಲೀಸ್ ಅಧಿಕಾರಿ ಆರ್.ಎಸ್.ವರ್ಮಾ ಹೇಳಿದ್ದಾರೆ.