ದುರ್ಗಾ ಮೂರ್ತಿಯ ವಿಸರ್ಜನೆಯ ವೇಳೆ ಜನರ ಮೇಲೆ ಹರಿದ ಕಾರು,ಮೂವರಿಗೆ ಗಾಯ

photo: NDTV
ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ನಲ್ಲಿ ಶನಿವಾರ ತಡರಾತ್ರಿ ದುರ್ಗಾ ಮೂರ್ತಿಯ ವಿಸರ್ಜನೆಯ ವೇಳೆ ವೇಗವಾಗಿ ಬಂದ ಕಾರೊಂದು ಜನರ ಮೇಲೆ ಹರಿದ ಪರಿಣಾಮವಾಗಿ ಮೂವರು ಗಾಯಗೊಂಡಿದ್ದಾರೆ ಎಂದು NDTV ವರದಿ ಮಾಡಿದೆ.
ಈ ಘಟನೆಯ ವೀಡಿಯೊವನ್ನು ಪಕ್ಕದಲ್ಲಿದ್ದವರು ಹಂಚಿಕೊಂಡಿದ್ದು, ಕಾರು ಚಾಲಕ ಜನರ ಗುಂಪಿಗೆ ಢಿಕ್ಕಿ ಹೊಡೆದ ನಂತರ ಕಾರನ್ನು ಹಿಂದಕ್ಕೆ ಓಡಿಸಲು ಪ್ರಯತ್ನಿಸುತ್ತಿರುವುದನ್ನು ತೋರಿಸುತ್ತದೆ. 16 ವರ್ಷದ ಹುಡುಗನನ್ನು ಕಾರು ಸೆಳೆದುಕೊಂಡು ಹೋಗಿದೆ ಹಾಗೂ ಆತ ಗಂಭೀರ ಸ್ಥಿತಿಯಲ್ಲಿದ್ದಾನೆ ಎಂದು ವರದಿಯಾಗಿದೆ.
ಭೋಪಾಲ್ ರೈಲ್ವೇ ನಿಲ್ದಾಣದ ಹೊರಗಿನ ರಸ್ತೆಯಲ್ಲಿ ದುರ್ಗಾಮೂರ್ತಿ ಮೆರವಣಿಗೆ ಸಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಕರ್ತವ್ಯದಲ್ಲಿದ್ದ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಅವರ ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಶನಿವಾರ ನೆರೆಯ ಛತ್ತೀಸ್ಗಡ ರಾಜ್ಯದ ಜಶ್ಪುರ ಜಿಲ್ಲೆಯಲ್ಲಿ ದುರ್ಗಾ ಮೂರ್ತಿಯ ಮೆರವಣಿಗೆಯ ವೇಳೆ ಕಾರಿನಡಿ ಸಿಲುಕಿ ಓರ್ವ ಸಾವನ್ನಪ್ಪಿದ್ದು, 16 ಮಂದಿ ಗಾಯ ಗೊಂಡಿರುವ ಘಟನೆ ನಡೆದಿತ್ತು.