ಉಡುಪಿ; ದುರ್ಗಾದೌಡ್ ಪಾದಯಾತ್ರೆ : ಹಿಂಜಾವೇ ಪ್ರಮುಖರ ವಿರುದ್ಧ ಪ್ರಕರಣ ದಾಖಲು

ಉಡುಪಿ, ಅ.17: ಯಾವುದೇ ಅನುಮತಿ ಇಲ್ಲದೆ ಕೋವಿಡ್ ನಿಯಮ ಉಲ್ಲಂಘಿಸಿ ಅ.15ರಂದು ಉಡುಪಿಯಲ್ಲಿ ‘ದುರ್ಗಾ ದೌಡ್’ ಪಾದಯಾತ್ರೆ ನಡೆಸಿದ ಉಡುಪಿ ಹಿಂದೂ ಜಾಗರಣಾ ವೇದಿಕೆ ಸಂಘಟನೆಯ ಪ್ರಮುಖರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಯಾವುದೇ ಪೂರ್ವಾನುಮತಿಯಿಲ್ಲದೆ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದಿಂದ ಅಂಬಲಪಾಡಿ ಮಹಾಕಾಳಿ ದೇವಸ್ಥಾನದವರೆಗೆ ಪಾದಯಾತ್ರೆ ಯನ್ನು ನಡೆಸಿ ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ಬಗ್ಗೆ ಸರಕಾರ/ಜಿಲ್ಲಾಧಿಕಾರಿಯವರ ಆದೇಶವನ್ನು ಉಲ್ಲಂಘನೆ ಮಾಡಿರುವುದಾಗಿ ಉಡುಪಿ ನಗರಸಭೆ ಪೌರಾಯುಕ್ತ ಹಾಗೂ ಕೋವಿಡ್ ನೋಡೆಲ್ ಅಧಿಕಾರಿ ಡಾ.ಉದಯ ಕುಮಾರ್ ಶೆಟ್ಟಿ ದೂರು ನೀಡಿದ್ದಾರೆ.
ಅದರಂತೆ ಹಿಂಜಾವೇ ಪ್ರಮುಖರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 188, 269 ಐಪಿಸಿ ಕಲಂ: 5(1), 5(4) ದ ಕರ್ನಾಟಕ ಅಪಿಡಮಿಕ್ ಡಿಸಿಸ್ ಆ್ಯಕ್ಟ್ 2020ರಂತೆ ಪ್ರಕರಣ ದಾಖಲಿಸಲಾಗಿದೆ. ಈ ಮೆರವಣಿಗೆಯಲ್ಲಿ ಸಚಿವ ವಿ.ಸುನೀಲ್ ಕುಮಾರ್, ಶಾಸಕ ಕೆ.ರಘುಪತಿ ಭಟ್, ಹಿಂಜಾವೇ ಮುಖಂಡರಾದ ಮಹೇಶ್ ಶೆಣೈ, ಪ್ರಕಾಶ್ ಕುಕ್ಕೆಹಳ್ಳಿ, ವಿಶು ಶೆಟ್ಟಿ ಅಂಬಲಪಾಡಿ ಸಹಿತ ಅನೇಕ ಪ್ರಮುಖರು ಭಾಗವಹಿಸಿದ್ದರು.
ಸರಕಾರದ ಆದೇಶದಂತೆ 400ಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ. ಅಲ್ಲದೆ ಮೆರವಣಿಗೆಗೆ ಅವಕಾಶ ಇರುವುದಿಲ್ಲ. ಈ ಎಲ್ಲ ಕಾನೂನು ಉಲ್ಲಂಘಿಸಿ ಸಾವಿರಾರು ಮಂದಿಯನ್ನು ಸೇರಿಸಿ ಮೆರವಣಿಗೆ ಮಾಡಲಾಗಿದೆ. ನಿಷೇಧಿತ ಪ್ರದೇಶಗಳಾಗಿರುವ ಕ್ಲಾಕ್ ಟವರ್ ಬಳಿ ಕೂಡ ಮೆರವಣಿಗೆ ನಡೆಸಲಾಗಿದೆ. ಅಲ್ಲದೆ ವಾಹನ ಸಂಚಾರಕ್ಕೂ ತಡೆಯೊಡ್ಡಲಾಗಿದೆ. ಈ ಹಿನ್ನೆಲೆಯಲ್ಲಿ ನೋಡೆಲ್ ಅಧಿಕಾರಿ ನೀಡಿದ ದೂರಿನಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಮುಖರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆದರೆ ಮೆರವಣಿಗೆಯಲ್ಲಿ ಹಿಂಜಾವೇ ಕಾರ್ಯಕರ್ತರು ತಲವಾರು, ಆಯುಧಗಳನ್ನು ಪ್ರದರ್ಶಿಸಿರುವುದರ ವಿರುದ್ಧ ಯಾವುದೇ ದೂರುಗಳು ಬಂದಿಲ್ಲ ಮತ್ತು ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.









.jpeg)

