ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಮಂಗಳೂರು : ದೇಶದ ಅಭಿವೃದ್ಧಿಗಾಗಿ ಮೌಲ್ಯಾಧಾರಿತ ರಾಜಕೀಯವೆಂಬ ಸೈದ್ಧಾಂತಿಕತೆಯ ತಳಹದಿಯಲ್ಲಿ ಸ್ಥಾಪಿತಗೊಂಡ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ವತಿಯಿಂದ, ಅಕ್ಟೋಬರ್ ತಿಂಗಳಲ್ಲಿ ರಾಷ್ಟೀಯ ಮಟ್ಟದಲ್ಲಿ ತನ್ನ ಪಕ್ಷಕ್ಕೆ ಸದಸ್ಯತ್ವ ಅಭಿಯಾನವನ್ನು ಕೈಗೊಂಡಿರುವುದಾಗಿ ಪಕ್ಷದ ದ.ಕ. ಜಿಲ್ಲಾ ಕಚೇರಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇದರ ಅಂಗವಾಗಿ ಕರ್ನಾಟಕ ರಾಜ್ಯ ಘಟಕವು ಈ ಅಭಿಯಾನದ ಪ್ರಯುಕ್ತ ಅ. 15 ರಿಂದ 31ರವರೆಗೆ ತಮ್ಮ ಪಕ್ಷವನ್ನು ಸಾರ್ವಜನಿಕರಲ್ಲಿ ಪರಿಚಯಿಸುವ ಸಲುವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ವೆಲ್ಫೇರ್ ಪಕ್ಷವು ಇಂದು ರಾಜ್ಯದೆಲ್ಲೆಡೆಯ ಎಲ್ಲಾ ಜಿಲ್ಲೆಗಳಲ್ಲೂ ಪಕ್ಷದ ಜಿಲ್ಲಾ ಕೇಂದ್ರ ಕಚೇರಿಯನ್ನು ಹೊಂದಿರುವುದಾಗಿ ತಿಳಿಸಿದ ಪಕ್ಷದ ದ.ಕ.ಜಿಲ್ಲಾ ಮಾಧ್ಯಮ ವಕ್ತಾರರಾದ ಅಬ್ದುಲ್ ಖಾದರ್ ಕುಕ್ಕಾಜೆಯವರು ಅದರಂತೆಯೇ ನಮ್ಮ ದ.ಕ.ಜಿಲ್ಲಾ ಕಚೇರಿಯಲ್ಲಿಯೂ ಸದಸ್ಯತ್ವ ಅಭಿಯಾನವನ್ನು ಆರಂಭಿಸಲಾಗಿದೆ ಮತ್ತು ಅದರ ಅಂಗವಾಗಿ ಶನಿವಾರ ವೆಲ್ಫೇರ್ ಜಿಲ್ಲಾ ಕಚೇರಿಯಲ್ಲಿ ಸದಸ್ಯತ್ವ ಅಭಿಯಾನದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ, ವೆಲ್ಫೇರ್ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಶ್ರೀಕಾಂತ ಸಾಲ್ಯಾನ್ ಸಾಂಕೇತಿಕವಾಗಿ ಉದ್ಘಾಟಿಸಿದರು.
ಈ ಸಂದರ್ಭ ಪಕ್ಷದ ದ.ಕ. ಜಿಲ್ಲಾಧ್ಯಕ್ಷ ನ್ಯಾಯವಾದಿ ಸರ್ಫಾರಾಝ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಸೈಫ್, ಅಭಿಯಾನದ ಸಂಚಾಲಕ ಹುಸೇನ್ ತೊಕ್ಕೊಟು, ವೆಲ್ಫೇರ್ ಪಕ್ಷದ ದ.ಕ. ಜಿಲ್ಲಾ ಸಮಿತಿ ಸದಸ್ಯರು ಹಾಗೂ ಪಕ್ಷದ ಕಾರ್ಮಿಕ ಸಂಘಟನೆಯಾಗಿರುವ ಫೆಡರೇಷನ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಇದರ ರಾಜ್ಯ ಸಮಿತಿಯ ಸದಸ್ಯರೂ ಆಗಿರುವ ದಿವಾಕರ್ ರಾವ್ ಬೋಳೂರು ಉಪಸ್ಥಿತರಿದ್ದರು.
ಮುಂಬರುವ ದಿನಗಳಲ್ಲಿ ವೆಲ್ಫೇರ್ ಪಕ್ಷವು ಸಾರ್ವಜನಿಕರಲ್ಲಿ ಮೌಲ್ಯಾಧಾರಿತ ರಾಜಕೀಯದ ಮಹತ್ವ ಮತ್ತು ಮತದಾನದ ಬಗ್ಗೆಯೂ ಜಾಗೃತಿ ಮೂಡಿಸುವ ಜತೆಗೆ ತಮ್ಮ ಪಕ್ಷದ ಧ್ಯೇಯ ಧೋರಣೆಗಳನ್ನು ಜನ ಸಾಮಾನ್ಯರಿಗೆ ಮನವರಿಕೆ ಮಾಡಿಸುವ ಪ್ರಯತ್ನವನ್ನು ಮಾಡಲಿದೆ ಎಂದು ಅವರು ಈ ಸಂದರ್ಭ ಹೇಳಿದರು.







