ಪೆಟ್ರೋಲ್, ಡೀಸೆಲ್ ಈಗ ವಿಮಾನ ಇಂಧನಕ್ಕಿಂತ ಶೇ.30 ಕ್ಕಿಂತ ಹೆಚ್ಚು ದುಬಾರಿ
ಹೊಸದಿಲ್ಲಿ: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ಹೊಸ ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿದ್ದು, ರವಿವಾರ ಮತ್ತೊಮ್ಮೆ ದರವನ್ನು ಲೀಟರ್‌ಗೆ 35 ಪೈಸೆ ಹೆಚ್ಚಿಸಲಾಗಿದೆ. ಆಟೋ ಇಂಧನಗಳು ಈಗ ಏವಿಯೇಶನ್ ಟರ್ಬೈನ್ ಫ್ಯೂಲ್ (ಎಟಿಎಫ್ )ವಿಮಾನಗಳಿಗೆ ಮಾರಾಟ ಮಾಡುವ ಇಂಧನ ದರಕ್ಕಿಂತ ಶೇ.30 ಕ್ಕಿಂತ ಹೆಚ್ಚು ದುಬಾರಿಯಾಗಿದೆ.
ಸರಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆಯು ರೂ. 105.84 ಹಾಗೂ ಮುಂಬೈನಲ್ಲಿ ಪ್ರತಿ ಲೀಟರ್‌ಗೆ 111.77 ರೂ. ಆಗಿದೆ.
ಮುಂಬೈನಲ್ಲಿ ಡೀಸೆಲ್ ಈಗ ಲೀಟರ್‌ಗೆ 102.52 ರೂ., ದಿಲ್ಲಿಯಲ್ಲಿ ಇದರ ಬೆಲೆ 94.57 ರೂ. ತಲುಪಿದೆ.
ಈ ಏರಿಕೆಯೊಂದಿಗೆ ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ಪೆಟ್ರೋಲ್ ಈಗ ಲೀಟರ್ ಗೆ 100ರ ಮಾರ್ಕ್ ಅಥವಾ ಅದಕ್ಕಿಂತ ಹೆಚ್ಚಿನದಾಗಿದ್ದರೆ, ಡೀಸೆಲ್ ಒಂದು ಡಜನ್‌ಗಿಂತಲೂ ಹೆಚ್ಚು ರಾಜ್ಯಗಳಲ್ಲಿ 100ರ ಗಡಿಯನ್ನು ಮುಟ್ಟಿದೆ. ಡೀಸೆಲ್ ಬೆಂಗಳೂರು, ದಮನ್ ಹಾಗೂ ಸಿಲ್ವಾಸ್ಸಾದಲ್ಲಿ ರೂ 100 ರ ಗಡಿ ದಾಟಿದೆ.
ಏವಿಯೇಶನ್ ಟರ್ಬೈನ್ ಫ್ಯೂಲ್ (ಎಟಿಎಫ್ ) ವಿಮಾನಯಾನಗಳಿಗೆ ಮಾರಾಟ ಮಾಡುವ ಇಂಧನ ಬೆಲೆಗಿಂತ ಈಗ ದ್ವಿಚಕ್ರ ವಾಹನಗಳು ಹಾಗೂ ಕಾರುಗಳಲ್ಲಿ ಬಳಸುವ ಪೆಟ್ರೋಲ್ ಬೆಲೆ ಶೇಕಡಾ 33 ರಷ್ಟು ಹೆಚ್ಚಾಗಿದೆ. ದಿಲ್ಲಿಯಲ್ಲಿ ಎಟಿಎಫ್ ಪ್ರತಿ ಲೀಟರ್‌ಗೆ 79 ರೂ. ಇದೆ.
ರಾಜಸ್ಥಾನದ ಗಂಗಾನಗರದಲ್ಲಿ ಇಂಧನ ಬೆಲೆ ಅತ್ಯಂತ ದುಬಾರಿ ಆಗಿದೆ. ಅಲ್ಲಿ ಪೆಟ್ರೋಲ್ ಲೀಟರ್‌ಗೆ 117.86 ರೂ. ಹಾಗೂ ಡೀಸೆಲ್ ರೂ. 105.95 ಇದೆ.