ಗುಜರಾತ್ ಸರಕಾರದಿಂದ ಬುಡಕಟ್ಟು ಜನಾಂಗಗಳ ಕೇಸರೀಕರಣದ ಹುನ್ನಾರ: ವರದಿ
ಅಯೋಧ್ಯೆ ರಾಮಮಂದಿರ ಭೇಟಿಗಾಗಿ 5,000 ರೂ.ಆರ್ಥಿಕ ನೆರವು ಘೋಷಣೆ

Photo: Reuters/Danish Siddiqui
ಹೊಸದಿಲ್ಲಿ,ಅ.17: ಗುಜರಾತ್ ಸರಕಾರವು ಬುಡಕಟ್ಟು ಜನಾಂಗಗಳ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮದ ಅಂಗವಾಗಿ ರಾಜ್ಯದಲ್ಲಿಯ ಆದಿವಾಸಿಗಳು ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಲು ವಿಶೇಷ ಆರ್ಥಿಕ ನೆರವನ್ನು ಒದಗಿಸುವುದಾಗಿ ಘೋಷಿಸಿದೆ. ಯಾವುದೇ ಆದಿವಾಸಿ ‘ರಾಮ ಲಲ್ಲಾ ದರ್ಶನ’ದ ಸಾಕ್ಷವನ್ನು ಸಲ್ಲಿಸಿ ಸರಕಾರದಿಂದ 5,000 ರೂ.ಗಳನ್ನು ಪಡೆದುಕೊಳ್ಳಬಹುದು. ಬಿಜೆಪಿ ಆಡಳಿತದ ಇತರ ರಾಜ್ಯಗಳಲ್ಲಿಯೂ ಈ ಯೋಜನೆ ಅನುಷ್ಠಾನಗೊಳ್ಳಬಹುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ರಾಜ್ಯದ ಬಿಜೆಪಿ ಸರಕಾರದ ಈ ಘೋಷಣೆಯು ಅದು ಬುಡಕಟ್ಟು ಜನಾಂಗಗಗಳನ್ನು ಕೇಸರೀಕರಣದ ಹುನ್ನಾರವನ್ನು ನಡೆಸುತ್ತಿದೆ ಎಂಬ ಕಳವಳಗಳನ್ನು ಸೃಷ್ಟಿಸಿದೆ. ಸುದ್ದಿ ಜಾಲತಾಣ thewire.in ಈ ಬಗ್ಗೆ ವಿಶ್ಲೇಷಣಾತ್ಮಕ ವರದಿಯೊಂದನ್ನು ಪ್ರಕಟಿಸಿದೆ. ಗುಜರಾತಿನಾದ್ಯಂತ ದಸರಾ ಮಹೋತ್ಸವದ ಜೊತೆಗೆ ಶ್ರೀರಾಮನೊಂದಿಗೆ ಗುರುತಿಸಿಕೊಂಡಿರುವ ಎಲ್ಲ ಯಾತ್ರಾಸ್ಥಳಗಳಲ್ಲಿಯ ಬುಡಕಟ್ಟು ಪ್ರದೇಶಗಳಲ್ಲಿ ವಿಶೇಷ ಸಮಾರಂಭಗಳನ್ನು ನಡೆಸಲಾಗುತ್ತದೆ.
ದಸರಾ ಸಂದರ್ಭದಲ್ಲಿ ಶಬರಿ ಧಾಮ್ನಲ್ಲಿ ಬುಡಕಟ್ಟು ಜನರ ಬೃಹತ್ ಸಮಾವೇಶದಲ್ಲಿ ಮಾತನಾಡಿದ ರಾಜ್ಯದ ಪ್ರವಾಸೋದ್ಯಮ ಮತ್ತು ಯಾತ್ರಾ ಅಭಿವೃದ್ಧಿ ಸಚಿವ ಪೂರ್ಣೇಶ ಮೋದಿಯವರು,‘ನಾವು ಗುಜರಾತಿನ ಒಂದು ಕೋಟಿ ಜನರು ಶಬರಿ ಮಾತೆಯ ನೇರ ಸಂತತಿಯಾಗಿದ್ದೇವೆ, ಹೀಗಾಗಿ ಅಯೋಧ್ಯೆಯಲ್ಲಿನ ರಾಮ ಜನ್ಮಭೂಮಿಗೆ ಭೇಟಿ ನೀಡಲು ಎಲ್ಲ ಆದಿವಾಸಿಗಳಿಗೆ 5,000 ರೂ.ಗಳ ವಿಶೇಷ ನೆರವನ್ನು ಒದಗಿಸಲಾಗುವುದು ’ಎಂದು ಘೋಷಿಸಿದ್ದಾರೆ.
ಮುಂದಿನ ವರ್ಷದ ಡಿಸೆಂಬರ್ನಲ್ಲಿ ಗುಜರಾತಿನಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಅಯೋಧ್ಯೆ ಕೊಡುಗೆಯು ಅಭಿವೃದ್ಧಿ ಮತ್ತು ಕಲ್ಯಾಣ ಉಪಕ್ರಮದ ಸೋಗಿನಲ್ಲಿ ಬಿಜೆಪಿಯ ಬುಡಕಟ್ಟು ತುಷ್ಟೀಕರಣ ಕಾರ್ಯಕ್ರಮದ ಭಾಗವಾಗಿದೆ.
ರಾಜ್ಯದಲ್ಲಿ ಆದಿವಾಸಿಗಳು ಒಟ್ಟು ಜನಸಂಖ್ಯೆಯ ಶೇ.15ರಷ್ಟಿದ್ದು,ಇದು ರಾಷ್ಟ್ರೀಯ ಆದಿವಾಸಿ ಜನಸಂಖ್ಯೆ (ಶೇ.8.6)ಗಿಂತ ಅಧಿಕವಾಗಿದೆ. ಹೀಗಾಗಿ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟು ಆದಿವಾಸಿಗಳ ಓಲೈಕೆಗೆ ಬಿಜೆಪಿ ಮುಂದಾಗಿದೆ. ರಾಜ್ಯ ವಿಧಾನಸಭೆಯ 182 ಸ್ಥಾನಗಳ ಪೈಕಿ 27 ಬುಡಕಟ್ಟು ಜನಾಂಗಗಳಿಗೆ ಮೀಸಲಾಗಿವೆ. ಇತರ 14 ವಿಧಾನಸಭಾ ಕ್ಷೇತ್ರಗಳಲ್ಲಿ ಬುಡಕಟ್ಟು ಸಮುದಾಯಗಳ ಮತಗಳು ಮಹತ್ವವನ್ನು ಪಡೆದುಕೊಂಡಿವೆ. ಇದಲ್ಲದೆ ರಾಜ್ಯದ ನಾಲ್ಕು ಲೋಕಸಭಾ ಕ್ಷೇತ್ರಗಳೂ ಈ ಜನಾಂಗಗಳಿಗೆ ಮೀಸಲಾಗಿವೆ. ಇಂದಿರಾ ಗಾಂಧಿಯವರ ಹತ್ಯೆಯವರೆಗೆ ಗುಜರಾತಿನ ಆದಿವಾಸಿಗಳು ಕಾಂಗ್ರೆಸ್ ಬಿಟ್ಟು ಅನ್ಯಪಕ್ಷಕ್ಕೆ ಮತಗಳನ್ನು ಹಾಕಿರಲಿಲ್ಲ. ಹೆಚ್ಚಿನವರು ನಿರಕ್ಷರಿಗಳಾಗಿದ್ದರೂ ಕಾಂಗ್ರೆಸ್ ಚುನಾವಣಾ ಚಿಹ್ನೆಯನ್ನು ಬಲ್ಲರು. ಹೆಚ್ಚಿನವರು ಇಂದಿರಾರನ್ನು ‘ಮಾ’ಎಂದೇ ಕರೆಯುತ್ತಿದ್ದರು.
ಬಿಜೆಪಿಯ ಚುನಾವಣಾ ಲಾಭಕ್ಕಾಗಿ ಆದಿವಾಸಿಗಳ ಓಲೈಕೆಗಾಗಿ ಆರೆಸ್ಸೆಸ್ನ ಮೊದಲ ಪ್ರಯೋಗ ಗುಜರಾತಿನ ಹಿಂದುತ್ವ ಪ್ರಯೋಗ ಶಾಲೆಯಲ್ಲಿಯೇ ನಡೆದಿತ್ತು. ನರೇಂದ್ರ ಮೋದಿಯವರಿಗೂ ಇದಕ್ಕೂ ಸಂಬಂಧವಿರಲಿಲ್ಲ ಮತ್ತು ಇದು ಆರೆಸ್ಸೆಸ್,ವಿಹಿಂಪ ಮತ್ತು ಬಜರಂಗ ದಳದ ಜಂಟಿ ಪ್ರಯತ್ನವಾಗಿತ್ತು. ಮೂರು ಸ್ಫೋಟ ಪ್ರಕರಣಗಳಲ್ಲಿ ಅರೋಪಿಯಾಗಿದ್ದು ಬಳಿಕ ಬಿಡುಗಡೆಗೊಂಡಿರುವ ಸ್ವಾಮಿ ಅಸೀಮಾನಂದರನ್ನು ಇದಕ್ಕಾಗಿ ಪ್ರಾಜೆಕ್ಟ್ ಮ್ಯಾನೇಜರ್ ಮಾಡಲಾಗಿತ್ತು. ವನವಾಸಿ ಕಲ್ಯಾಣ ಕೇಂದ್ರದಂತಹ ಸಂಘ ಪರಿವಾರ ಸಂಘಟನೆಗಳೂ ಆದಿವಾಸಿಗಳ ಕೇಸರೀಕರಣದಲ್ಲಿ ತೊಡಗಿಕೊಂಡಿವೆ.
1995ರಲ್ಲಿ ಬಿಜೆಪಿ ಗುಜರಾತಿನಲ್ಲಿ ಮೊದಲ ಬಾರಿಗೆ ಬಹುಮತದ ಗೆಲುವು ಸಾಧಿಸಿದ ಬಳಿಕ ಈ ಪ್ರಯತ್ನಗಳು ಇನ್ನಷ್ಟು ಬಲ ಪಡೆದುಕೊಂಡಿದ್ದವು.
ಆದಿವಾಸಿಗಳು ಹಿಂದುಗಳೇ ಎನ್ನುವುದು ಚರ್ಚಾರ್ಹ ವಿಷಯವಾಗಿದೆ. ಅವರು ಪ್ರಕೃತಿಯನ್ನು ಆರಾಧಿಸುತ್ತಾರೆ. ತಾವು ಹಿಂದುಗಳು ಎಂದು ಅವರು ನಂಬುವಂತಾಗಲು ಬಿಜೆಪಿ ಅವರ ‘ಬ್ರೇನ್ ವಾಷ್ ’ಮಾಡುತ್ತಲೇ ಬಂದಿದೆ. ಆದರೆ ಇದನ್ನು ಎಲ್ಲರೂ ಒಪ್ಪುವುದಿಲ್ಲ. ‘ನಾವು ಮೂಲನಿವಾಸಿಗಳಾಗಿದ್ದೇವೆ. ಆದರೆ ಬಿಜೆಪಿ ನಮ್ಮ ಕೇಸರೀಕರಣಕ್ಕೆ ಮತ್ತೆ ಪ್ರಯತ್ನಿಸುತ್ತಿದೆ ’ಎಂದು ಛೋಟಾ ಉದೇಪುರದ ಕಾಂಗ್ರೆಸ್ ಶಾಸಕ ಸುಖರಾಮ ರಾಥ್ವಾ ಹೇಳಿದರು.
ಗುಜರಾತಿನಲ್ಲಿ ಹೆಚ್ಚಿನ ಆದಿವಾಸಿಗಳು ಬಡತನ ರೇಖೆಗಿಂತ ಕೆಳಗಿದ್ದಾರೆ. ಹೀಗಾಗಿ 5,000 ರೂ.ಗಳ ಅಯೋಧ್ಯೆ ಕೊಡುಗೆ ಅವರ ಪಾಲಿಗೆ ದೊಡ್ಡ ಮೊತ್ತವಾಗಿದೆ ಮತ್ತು ಇದು ಬಿಜೆಪಿಗೆ ಚೆನ್ನಾಗಿ ಗೊತ್ತಿದೆ.
ಆದಿವಾಸಿಗಳಿಗೆ ಉತ್ತಮ ಆರೋಗ್ಯ ಸೌಲಭ್ಯಗಳು,ಶಾಲೆಗಳು.ಸಬಲೀಕರಣದ ಅಗತ್ಯವಿದೆ. ಅವರು ತಮ್ಮ ಅರಣ್ಯ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಅವರಿಗೆ ಉದ್ಯೋಗ ಬೇಕು. ಇದನ್ನು ಮಾಡುವ ಬದಲು ಆಡಳಿತ ಬಿಜೆಪಿ ಸರಕಾರವು ಇಂತಹ ಕೊಡುಗೆಗಳನ್ನು ನೀಡುವ ಮೂಲಕ ಅವರನ್ನು ಧಾರ್ಮಿಕ ನೆಲೆಯಲ್ಲಿ ವಿಭಜಿಸಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದೆ ಎಂದು ವರದಿ ಉಲ್ಲೇಖಿಸಿದೆ.







