ಮೈಸೂರು; ದಸರಾದಲ್ಲಿ ಭಾಗವಹಿಸಿದ್ದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ಬೀಳ್ಕೊಡುಗೆ

ಮೈಸೂರು,ಅ.17: ವಿಶ್ವವಿಖ್ಯಾತ ಮೈಸೂರ ದಸರಾ ಮಹೋತ್ಸವದಲ್ಲಿ ಭಾಗವಹಿಸಿದ್ದ ಗಜಪಡೆಗೆ ರವಿವಾರ ಬೆಳಗ್ಗೆ ಅರಮನೆ ಆವರಣದಲ್ಲಿ ಬೀಳ್ಕೊಡುಗೆ ನೀಡಲಾಯಿತು. ನಂತರ ಕ್ಯಾಪ್ಟನ್ ಅಭಿಮನ್ಯು ತಂಡದ ಆನೆಗಳು ನಾಡಿನಿಂದ ಕಾಡಿನತ್ತ ಪ್ರಯಾಣ ಬೆಳಸಿದೆ.
ಆನೆಗಳು ಹೊರಡುವ ಮುನ್ನಾ ಸ್ನಾನ ಮಾಡಿಸಿದ ಮಾವುತರು ಕಾವಾಡಿಗಳು. ಬಳಿಕ ಎಲ್ಲಾ ಆನೆಗಳನ್ನು ಒಟ್ಟಿಗೆ ನಿಲ್ಲಿಸಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು.
ಆನೆಗಳು ಸುರಕ್ಷಿತವಾಗಿ ಸ್ವಸ್ಥಾನ ತಲುಪುವಂತೆ ಪ್ರಾರ್ಥಿಸಲಾಯಿತು. ಪೂಜೆಯ ವೇಳೆ ತಂಡದ ಎಲ್ಲಾ ಎಂಟು ಆನೆಗಳು ಹಾಜರಿದ್ದವು.
ಮದವೇರಿದ ಕಾರಣ ದಸರಾ ಚಟುವಟಿಕೆಗಳಿಂದ ದೂರ ಉಳಿದಿದ್ದ ವಿಕ್ರಮ ಆನೆಯೂ ಪೂಜೆಯಲ್ಲಿ ಭಾಗವಹಿಸಿತ್ತು.ಪೂಜೆ ಸಲ್ಲಿಸಿದ ನಂತರ ಲಾರಿಗಳನ್ನೇರಿ ಗಜಪಡೆ ಸ್ವಸ್ಥಾನಕ್ಕೆ ತೆರಳಲಿವೆ. ಸೆ. 13 ರಂದು ಕಾಡಿನಿಂದ ಮೈಸೂರಿಗೆ ಆಗಮಿಸಿದ್ದ ಎಂಟು ಆನೆಗಳು ಪ್ರತಿದಿನ ವಿವಿಧ ತಾಲೀಮುಗಳಲ್ಲಿ ಪಾಲ್ಗೊಂಡವು. ದಸರಾ ಜಂಬೂಸವಾರಿಗಾಗಿ ಕಾಡಿನಿಂದ ನಾಡಿಗೆ ಬಂದಿದ್ದ ಗಜಪಡೆಗೆ ಮೈಸೂರಿನ ಅಂಬಾ ವಿಲಾಸ ಅರಮನೆ ಆವರಣದಲ್ಲಿ ಆನೆಗಳಿಗೆ ಮಜ್ಜನ ಮಾಡಿಸಿ ಸಾಂಪ್ರದಾಯಿಕ ಪೂಜಾ ವಿಧಾನಗಳನ್ನು ನೆರವೇರಿಸಲಾಯಿತು. ಯಶಸ್ವಿಯಾಗಿ ತಮ್ಮ ಜವಾಬ್ದಾರಿ ನಿಭಾಯಿಸಿ ಶಿಸ್ತುಬದ್ಧ ಗಜಪಡೆ ತಮ್ಮೂರಿನತ್ತ ಪಯಣ ಬೆಳಸಿದವು.
ಈ ವೇಳೆ ಡಿಸಿಎಫ್ ಕರಿಕಾಳನ್, ಅಭಿಮನ್ಯು ಆನೆ ಮಾವುತ ವಸಂತ, ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಮಣ್ಯ, ರವಿಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







