ಜಮ್ಮು-ಕಾಶ್ಮೀರ:ಬಿಹಾರದ ಇಬ್ಬರು ಕಾರ್ಮಿಕರನ್ನು ಹತ್ಯೆಗೈದ ಉಗ್ರರು

photo: ANI
ಹೊಸದಿಲ್ಲಿ: ಭಯೋತ್ಪಾದಕರು ನಾಗರಿಕರನ್ನು ಗುರಿಯಾಗಿಸಿ ಹತ್ಯೆಗೈಯುತ್ತಿರುವ ಘಟನೆ ಮುಂದುವರಿದಿದೆ. ರವಿವಾರ ಜಮ್ಮು-ಕಾಶ್ಮೀರದ ಕುಲ್ಗಾಮ್ನಲ್ಲಿ ಬಿಹಾರದ ಇಬ್ಬರು ಕಾರ್ಮಿಕರನ್ನು ಹತ್ಯೆಗೈದಿರುವ ಉಗ್ರರು ಇನ್ನೊಬ್ಬನನ್ನು ಗಾಯಗೊಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ ಉಗ್ರರು ಕಾರ್ಮಿಕರ ಬಾಡಿಗೆ ಮನೆಯ ಮೇಲೆ ಗುಂಡಿನ ದಾಳಿ ನಡೆಸಿ ಈ ಕೃತ್ಯ ಎಸಗಿದ್ದಾರೆ.
ಉಗ್ರರ ಗುಂಡಿಗೆ ಬಲಿಯಾದವರನ್ನು ರಾಜಾ ರೆಶಿ ದೇವ್ ಹಾಗೂ ಜೋಗಿಂದರ್ ರೆಶಿ ದೇವ್ ಎಂದು ಗುರುತಿಸಲಾಗಿದೆ. ಚುನ್ ಚುನ್ ರೆಶಿದೇವ್ ಗಾಯಗೊಂಡಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ. ಮೂವರು ಬಿಹಾರ ಮೂಲದವರು.
ಭದ್ರತಾ ಪಡೆಗಳು ಸ್ಥಳವನ್ನು ಸುತ್ತುವರಿದು ಉಗ್ರರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಉಗ್ರರು ಇತ್ತೀಚೆಗೆ ಸ್ಥಳೀಯರು ಹಾಗೂ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ನಡೆಸಿರುವ ದಾಳಿಯಲ್ಲಿ ಸುಮಾರು 11 ಮಂದಿ ಸಾವನ್ನಪ್ಪಿದ್ದಾರೆ.
ಬಿಹಾರದ ಬೀದಿಬದಿ ವ್ಯಾಪಾರಿ ಹಾಗೂ ಉತ್ತರಪ್ರದೇಶದ ಬಡಗಿಯನ್ನು ಉಗ್ರರು ಶನಿವಾರ ಗುಂಡಿಕ್ಕಿ ಸಾಯಿಸಿದ್ದರು.
ಇತ್ತೀಚೆಗಿನ ನಾಗರಿಕರ ಹತ್ಯೆಯಲ್ಲಿ ಕಾಶ್ಮೀರಿಗಳು ಭಾಗಿಯಾಗಿಲ್ಲ: ಫಾರೂಕ್ ಅಬ್ದುಲ್ಲಾ
ಜಮ್ಮು ಹಾಗೂ ಕಾಶ್ಮೀರದಲ್ಲಿ ನಡೆದ ಇತ್ತೀಚೆಗಿನ ನಾಗರಿಕರ ಹತ್ಯೆಯಲ್ಲಿ ಕಾಶ್ಮೀರಿಗಳು ಭಾಗಿಯಾಗಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ)ನ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ರವಿವಾರ ಹೇಳಿದ್ದಾರೆ. ಕಾಶ್ಮೀರಿಗಳ ಗೌರವಕ್ಕೆ ಧಕ್ಕೆ ತರಲು ಈ ಹತ್ಯೆ ನಡೆಸಲಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಕೇಂದ್ರಾಡಳಿತ ಪ್ರದೇಶದ ಶಾಂತಿಯುತ ವಾತಾವರಣವನ್ನು ಪ್ರಕ್ಷುಬ್ದಗೊಳಿಸಲು ಈ ಹತ್ಯೆ ನಡೆಸಲಾಗುತ್ತಿದೆ ಎಂದು ಜಮ್ಮು ಹಾಗೂ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ. ‘‘ಈ ಹತ್ಯೆ ದುರಾದೃಷ್ಟಕರ. ಪಿತೂರಿಯಿಂದ ಈ ಹತ್ಯೆ ನಡೆಸಲಾಗಿದೆ. ಈ ಹತ್ಯೆಗಳಲ್ಲಿ ಕಾಶ್ಮೀರಿಗಳು ಭಾಗಿಯಾಗಿಲ್ಲ. ಇದು ಕಾಶ್ಮೀರಿಗಳ ಗೌರವಕ್ಕೆ ಮಸಿ ಬಳಿಯುವ ಪ್ರಯತ್ನ’’ ಎಂದು ಅಬ್ದುಲ್ಲಾ ಹೇಳಿದ್ದಾರೆ.







