ಬೈಕಂಪಾಡಿಯಲ್ಲಿ ನಾಗ ವಿಗ್ರಹ ಧ್ವಂಸಗೈದ ಕಿಡಿಗೇಡಿಗಳು

ಮಂಗಳೂರು, ಅ.17: ಬೈಕಂಪಾಡಿಯ ಪ್ರದೇಶದಲ್ಲಿನ ಜಾರಂದಾಯ ಧೂಮಾವತಿ ದೇವಸ್ಥಾನ ಬಳಿಯ ಕರ್ಕೇರ ಮೂಲಸ್ಥಾನ ದಲ್ಲಿ ನಾಗನಕಟ್ಟೆಗೆ ಹಾನಿ ಮಾಡಿದ್ದಲ್ಲದೆ, ಕಾಣಿಕೆ ಹುಂಡಿ, ಮೂಲಸ್ಥಾನದ ಕಚೇರಿಯಲ್ಲಿದ್ದ ಕಪಾಟು ಹಾಗೂ ನಂದಿ ವಿಗ್ರಹವನ್ನು ಕಿಡಿಗೇಡಿಗಳು ಪುಡಿಗೈದ ಘಟನೆ ರವಿವಾರ ಬೆಳಕಿಗೆ ಬಂದಿದೆ.
ಅ.11ರಂದು ನಾಗಬನ ತೆರೆಯಲಾಗಿತ್ತು. ಬಳಿಕ ರವಿವಾರ ನಾಗಬನ ತೆರೆಯಲೆಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಕರ್ಕೇರ ಮೂಲಸ್ಥಾನದ ಗುರಿಕಾರರು ಆಗಮಿಸಿದ್ದರು. ಸಂಕ್ರಮಣ ಪೂಜೆಗೆಂದು ನಾಗದೇವರ ಕಟ್ಟೆ ಬಳಿ ತೆರಳಿದಾಗ ಈ ಕೃತ್ಯ ನಡೆದಿರು ವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಕರ್ಕೇರ ಮೂಲಸ್ಥಾನದ ಕಿರಣ್ ಕುಮಾರ್ ಹಾನಿಯಾದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಘಟನಾ ಸ್ಥಳಕ್ಕೆ ಮಾಜಿ ಶಾಸಕ ಮೊಯ್ದಿನ್ ಬಾವ, ಸ್ಥಳೀಯ ಕಾರ್ಪೊರೇಟರ್ ಸುಮಿತ್ರ ಕರಿಯಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಸಿಟಿವಿ ವಶಕ್ಕೆ: ಸಮೀಪದಲ್ಲಿದ್ದ ಸಿಸಿಟಿವಿ ಪೂಟೇಜ್‌ಗಳನ್ನು ಪೊಲೀಸರು ವಶಕ್ಕೆ ಪಡೆದು, ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದಾರೆ. ಇಲ್ಲಿಯವರೆಗೂ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.







