ಮೀನುಗಾರಿಕಾ ಅಭಿವೃದ್ಧಿಗೆ 20,000 ಕೋಟಿ ರೂ. ಯೋಜನೆ : ಕೇಂದ್ರ ಸಚಿವ ಡಾ. ಮುರುಗನ್
ಮಂಗಳೂರಿಗೆ ಭೇಟಿ ನೀಡಿದ ಕೇಂದ್ರ ಸಚಿವ

ಮಂಗಳೂರು, ಅ.17: ದೇಶದಲ್ಲಿ ಮೀನುಗಾರಿಕಾ ಬಂದರುಗಳ ನವೀಕರಣ, ಅಭಿವೃದ್ಧಿ, ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತಗೊಳಿಸಲು 20,000 ಕೋಟಿ ರೂ. ನೀಡಲು ಸರಕಾರ ನಿರ್ಧರಿಸಿದೆ ಎಂದು ಕೇಂದ್ರ ಸರಕಾರದ ಮೀನುಗಾರಿಕೆ, ಪಶುಸಂಗೋಪನೆ, ಹೈನುಗಾರಿಕೆ, ವಾರ್ತಾ ಮತ್ತು ಪ್ರಸಾರ ಇಲಾಖೆಯ ಸಹಾಯಕ ಸಚಿವ ಡಾ.ಎಲ್.ಮುರುಗನ್ ತಿಳಿಸಿದ್ದಾರೆ.
ಬೈಕಂಪಾಡಿಯಲ್ಲಿರುವ ಐಸ್ ಪ್ಲ್ಯಾಂಟ್ ಘಟಕದಲ್ಲಿ ಪ್ರಧಾನಮಂತ್ರಿ ಮತ್ಸ ಸಂಪದ ಯೋಜನೆಯಡಿ ಫಲಾನುಭವಿಗಳಿಗೆ ಶೀತಲೀಕರಣ ವಾಹನಗಳ ವಿತರಣಾ ಕಾರ್ಯಕ್ರಮ ಉದ್ಘಾಟನೆ, ಐಸ್ ತಯಾರಿ ಘಟಕ ಹಾಗೂ ಬಂಗ್ರ ಕೂಳೂರಿನಲ್ಲಿ ಕೃತಕ ಮೀನು ಕೃಷಿ ಘಟಕಗಳನ್ನು ವೀಕ್ಷಿಸಿದ ಬಳಿಕ ಸುದ್ದಿಗಾರರನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಪ್ರಧಾನ ಮಂತ್ರಿಯ ಆತ್ಮ ನಿರ್ಭರ ಚಿಂತನೆಯೊಂದಿಗೆ ದೇಶದಲ್ಲಿ ಪ್ರಥಮ ಬಾರಿಗೆ ಸ್ಥಾಪನೆಯಾದ ಮೀನುಗಾರಿಕಾ ಸಚಿವಾಲಯದ ಮೂಲಕ ಮೀನುಗಾರಿಕಾ ಅಭಿವೃದ್ಧಿಗೆ ಮತ್ತು ಮೀನುಗಾರರ ಆರ್ಥಿಕ ಸಶಕ್ತತೆಗೆ ಪೂರಕವಾದ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಕಡಲು ಪಾಚಿ ಸಸ್ಯಗಳ ಅಭಿವೃದ್ಧಿ ಘಟಕಗಳನ್ನು ಸ್ಥಾಪಿಸಲು ಮೀನುಗಾರರಿಗೆ ನೆರವು ನೀಡಲಾಗುತ್ತಿದೆ. ಈ ಕಡಲು ಪಾಚಿ ಸಸ್ಯಗಳು ಔಷಧೀಯ ಗುಣಗಳನ್ನು ಹೊಂದಿದೆ. ಅದುದರಿಂದ ಇದು ಔಷಧ ಮತ್ತು ಆಹಾರ ತಯಾರಿಕೆಗೂ ಪೂರಕವಾದ ಕೃಷಿಯಾಗಿದ್ದು, ಮೀನುಗಾರರ ಆರ್ಥಿಕ ಅಭಿವೃದ್ಧಿಗೂ ಸಹಕಾರಿಯಾಗಲಿದೆ. ಈ ಕಡಲ ಪಾಚಿ ಸಸ್ಯಗಳ ಅಭಿವೃದ್ಧಿಗೆ ವಿಶೇಷ ವಿತ್ತ ವಲಯವನ್ನು ಸ್ಥಾಪಿಸಲಾಗುವುದು ಎಂದರು.
ಮೀನುಗಾರಿಕೆಯಲ್ಲಿ ಪಂಜರ ಮೀನು ಕೃಷಿ, ಒಳನಾಡಿನ ಸಿಹಿ ನೀರಿನ ಮೀನುಗಾರಿಕಾ ಕೃಷಿಗೂ ಮೀನುಗಾರಿಕಾ ಇಲಾಖೆಯ ಮೂಲಕ ನೆರವು ನೀಡಲಾಗುತ್ತದೆ. ಐಸ್ ಪ್ಲ್ಯಾಂಟ್ ನಿರ್ಮಾಣಕ್ಕೆ ಮೀನುಗಾರಿಕಾ ಇಲಾಖೆಯ ಮೂಲಕ ಶೇ.40 ಸಬ್ಸಿಡಿಯೊಂದಿಗೆ ಹಾಗೂ ಮಹಿಳೆಯರಿಗೆ ಶೇ.60 ಸಬ್ಸಿಡಿಯೊಂದಿಗೆ ಸರಕಾರ ಆರ್ಥಿಕ ನೆರವು ನೀಡುತ್ತಿದೆ. ಅದೇ ರೀತಿ ಮೀನು ರಫ್ತು ಉದ್ಯಮ ಸ್ಥಾಪನೆಗೂ ಸರಕಾರ ಆರ್ಥಿಕ ನೆರವು ಪ್ರೋತ್ಸಾಹ ನೀಡುತ್ತಿದೆ ಎಂದು ಸಚಿವ ಡಾ.ಮುರುಗನ್ ಹೇಳಿದರು.
ರಾಜ್ಯ ಒಳನಾಡು ಜಲಸಾರಿಗೆ ಮತ್ತು ಮೀನುಗಾರಿಕಾ ಸಚಿವ ಅಂಗಾರ ಮಾತನಾಡಿ, ರಾಜ್ಯದಲ್ಲಿ ಮೀನು ಕೃಷಿಗೆ ಪೂರಕವಾಗಿ ಮೀನು ಮರಿಗಳನ್ನು ಮೀನುಗಾರರಿಗೆ ಒದಗಿಸುವ ಉದ್ದೇಶವನ್ನು ಸರಕಾರ ಹೊಂದಿದೆ. ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯನ್ನು ಸಮರ್ಪಕವಾಗಿ ರಾಜ್ಯದಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕಾರ್ಯ ಯೋಜನೆಯೊಂದಿಗೆ ಸಾಗುತ್ತಿದೆ ಎಂದರು.
ರಾಜ್ಯ ಮೀನುಗಾರಿಕಾ ಇಲಾಖೆಯ ನಿರ್ದೇಶಕ ರಾಮಾಚಾರ್ಯ ಮಾತನಾಡಿ, ರಾಜ್ಯದಲ್ಲಿ 88 ಘಟಕಗಳ ಮೂಲಕ ಕಡಲು ಸಸ್ಯದ ಕೃಷಿಯನ್ನು ಅಭಿವೃದ್ಧಿಪಡಿಸುವ ಗುರಿ ಮೀನುಗಾರಿಕಾ ಇಲಾಖೆ ಹೊಂದಿದೆ. ಈ ಕೃಷಿಯಲ್ಲಿ ತೊಡಗಿಸಿಕೊಳ್ಳಲು 790 ಮಹಿಳೆಯರು ಮುಂದೆ ಬಂದಿದ್ದಾರೆ. ಸುಮಾರು 15 ರಿಂದ 20 ಸಾವಿರ ಮಹಿಳೆಯರು ಇದರಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಗುರಿ ಇದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಡಾ.ವೈ.ಭರತ್ ಶೆಟ್ಟಿ, ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ದ.ಕ ಮತ್ತು ಉಡುಪಿ ಮೀನುಗಾರರ ಒಕ್ಕೂಟದ ಅಧ್ಯಕ್ಷ ಯಶ್ಪಾಲ್ ಸುವರ್ಣ, ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.






.jpeg)

.jpeg)

.jpeg)
.jpeg)


