ಟ್ವೆಂಟಿ-20ಯಲ್ಲಿ ಹೊಸ ದಾಖಲೆ ನಿರ್ಮಿಸಿದ ಶಾಕಿಬ್ ಅಲ್ ಹಸನ್
ಶ್ರೀಲಂಕಾದ ಲಸಿತ್ ಮಾಲಿಂಗ ಸಾಧನೆ ಮೀರಿ ನಿಂತ ಬಾಂಗ್ಲಾ ಆಲ್ ರೌಂಡರ್

photo: AFP
ಢಾಕಾ: ಬಾಂಗ್ಲಾದೇಶದ ಆಲ್ರೌಂಡರ್ ಶಾಕಿಬ್ ಅಲ್ ಹಸನ್ ರವಿವಾರ ನಡೆದ ಸ್ಕಾಟ್ಲೆಂಡ್ ವಿರುದ್ಧದ ಟಿ-20 ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ತಮ್ಮ ತಂಡದ ಪರ ಬೌಲಿಂಗ್ ಮಾಡುವಾಗ ಹೊಸ ಟ್ವೆಂಟಿ- 20 ದಾಖಲೆಯನ್ನು ನಿರ್ಮಿಸಿದರು.
ರಿಚಿ ಬೆರಿಂಗ್ಟನ್ ಹಾಗೂ ಮೈಕೆಲ್ ಲೀಸ್ಕ್ ಅವರ ವಿಕೆಟ್ ಪಡೆದಿರುವ ಹಸನ್ ಅವರು ಲಸಿತ್ ಮಾಲಿಂಗ ಅವರ 107 ವಿಕೆಟ್ ಗಳ ದಾಖಲೆಯನ್ನು ಹಿಂದಿಕ್ಕಿದರು ಹಾಗೂ ಟ್ವೆಂಟಿ -20 ಅಂತರ್ ರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯಂತ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.
ಶ್ರೀಲಂಕಾದ ಮಾಲಿಂಗ 84 ಟಿ-20 ಪಂದ್ಯಗಳಲ್ಲಿ 107 ವಿಕೆಟ್ ಗಳಿಸಿದ್ದರು ಹಾಗೂ ಶಾಕಿಬ್ ಬಾಂಗ್ಲಾದೇಶದ ಪರ ಆಡಿದ್ದ 89ನೇ ಟಿ-20 ಅಂತರ್ ರಾಷ್ಟ್ರೀಯ ಪಂದ್ಯದಲ್ಲಿ ಲಂಕಾದ ಮಾಜಿ ಆಟಗಾರನ ಸಾಧನೆಯನ್ನು ಮೀರಿ ನಿಂತರು.
ಶಾಕಿಬ್ ಟಿ-20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 100 ಕ್ಕಿಂತ ಹೆಚ್ಚು ವಿಕೆಟ್ ಪಡೆದ ಏಕೈಕ ಕ್ರಿಕೆಟಿಗನಾಗಿದ್ದು, ಬ್ಯಾಟಿನಿಂದ ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.
ಶಾಕಿಬ್ ಪ್ರಸ್ತುತ ಬಾಂಗ್ಲಾದೇಶದ ಟಿ-20 ಪಂದ್ಯಗಳಲ್ಲಿ ಬ್ಯಾಟಿಂಗ್ ನಲ್ಲಿ 1,763 ರನ್ ಗಳಿಸಿದ್ದಾರೆ. 22.89 ಸರಾಸರಿ ಮತ್ತು 121.41 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಅವರು ಒಂಬತ್ತು ಅರ್ಧಶತಕಗಳನ್ನು ಗಳಿಸಿದ್ದಾರೆ ಮತ್ತು ಅವರ ಗರಿಷ್ಠ ಸ್ಕೋರ್ 84 ಅಗಿದೆ.
ಬೌಲಿಂಗ್ ನಲ್ಲಿ ಶಾಕಿಬ್ ತನ್ನ 108 ವಿಕೆಟ್ ಗಳನ್ನು 20.38 ರ ಸರಾಸರಿಯಲ್ಲಿ ಹಾಗೂ 6.70 ರ ಇಕಾನಮಿ ರೇಟ್ ನಲ್ಲಿ ಪಡೆದಿದ್ದಾರೆ. ಬೌಲಿಂಗ್ ನಲ್ಲಿ ಅವರ ಅತ್ಯುತ್ತಮ ಪ್ರದರ್ಶನ 5/20.