ವಿಶ್ವಕಪ್: ಬಾಂಗ್ಲಾದೇಶಕ್ಕೆ ಶಾಕ್ ನೀಡಿದ ಸ್ಕಾಟ್ಲೆಂಡ್
photo: ICC
ಅಲ್-ಅಮೆರಟ್(ಒಮಾನ್), ಅ. 17: ಸ್ಕಾಟ್ಲೆಂಡ್ ತಂಡ ಬಾಂಗ್ಲಾದೇಶದ ವಿರುದ್ಧದ ಐಸಿಸಿ ಟ್ವೆಂಟಿ-20 ವಿಶ್ವಕಪ್ನ ಬಿ ಗುಂಪಿನ ಮೊದಲ ಸುತ್ತಿನ ಎರಡನೇ ಪಂದ್ಯದಲ್ಲಿ 6 ರನ್ ಗಳ ಅಂತರದಿಂದ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ಬಾಂಗ್ಲಾದೇಶಕ್ಕೆ ಶಾಕ್ ನೀಡಿದೆ.
ರವಿವಾರ ನಡೆದ ಪಂದ್ಯದಲ್ಲಿ ಗೆಲ್ಲಲು 141 ರನ್ ಪಡೆದಿದ್ದ ಬಾಂಗ್ಲಾದೇಶ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿದೆ.
ಬಾಂಗ್ಲಾದೇಶದ ಪರ ಮುಶ್ಫಿಕುರ್ರಹೀಂ(38, 36 ಎಸೆತ, 1 ಬೌಂಡರಿ, 2 ಸಿಕ್ಸರ್), ನಾಯಕ ಮಹಮುದುಲ್ಲಾ(23, 22 ಎಸೆತ),ಶಾಕಿಬ್ ಅಲ್ ಹಸನ್(20,28 ಎಸೆತ) ಹಾಗೂ ಆರಿಫ್ ಹೊಸೈನ್ (18) ಎರಡಂಕೆಯ ಸ್ಕೋರ್ ಗಳಿಸಿದರು. 18 ರನ್ ಗೆ 2 ವಿಕೆಟ್ ಕಳೆದುಕೊಂಡ ಬಾಂಗ್ಲಾದೇಶ ಕಳಪೆ ಆರಂಭ ಪಡೆದಿತ್ತು.
ಸ್ಕಾಟ್ಲೆಂಡ್ ಪರವಾಗಿ ಬ್ರಾಡ್ ವೀಲ್(3-24), ಕ್ರಿಸ್ ಗ್ರೀವ್ಸ್(2-19)ಐದು ವಿಕೆಟ್ ಗಳನ್ನು ಹಂಚಿಕೊಂಡರು.
ಇದಕ್ಕೂ ಮೊದಲು ಟಾಸ್ ಜಯಿಸಿದ ಬಾಂಗ್ಲಾದೇಶದ ನಾಯಕ ಮಹಮುದುಲ್ಲಾ ಸ್ಕಾಟ್ಲೆಂಡ್ ತಂಡವನ್ನು ಬ್ಯಾಟಿಂಗ್ಗೆ ಇಳಿಸಿದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಕ್ರಿಸ್ ಗ್ರೀವ್ಸ್ ದಿಟ್ಟ ಹೋರಾಟದ ಹೊರತಾಗಿಯೂ ಮಹೆದಿ ಹಸನ್(3-19)ಬೌಲಿಂಗ್ ದಾಳಿಗೆ ಸಿಲುಕಿದ ಸ್ಕಾಟ್ಲೆಂಡ್ ತಂಡ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿತು.