ಮಕ್ಕಳಿಗೆ ಲಸಿಕೆ ನೀಡಿಕೆ ನಿರ್ಧಾರವು ವೈಜ್ಞಾನಿಕ ತರ್ಕಬದ್ಧತೆಯನ್ನು ಆಧರಿಸಿರಲಿದೆ: ಕೇಂದ್ರ

ಹೊಸದಿಲ್ಲಿ,ಅ.17: ಒಟ್ಟಾರೆ ವೈಜ್ಞಾನಿಕ ತಾರ್ಕಿಕತೆ ಮತ್ತು 18 ವರ್ಷಕ್ಕಿಂತ ಕೆಳಗಿನವರಿಗೆ ಲಸಿಕೆ ಪೂರೈಕೆ ಸ್ಥಿತಿಯನ್ನು ಆಧರಿಸಿ ಮಕ್ಕಳಿಗೆ ಮತ್ತು ಹದಿಹರೆಯದವರಿಗೆ ಕೋವಿಡ್ ಲಸಿಕೆಯನ್ನು ನೀಡುವ ಬಗ್ಗೆ ಸರಕಾರವು ಅಂತಿಮ ನಿರ್ಧಾರವೊಂದನ್ನು ತೆಗೆದುಕೊಳ್ಳಲಿದೆ ಎಂದು ಕೋವಿಡ್ ಕಾರ್ಯಪಡೆಯ ಮುಖ್ಯಸ್ಥ ವಿ.ಕೆ.ಪಾಲ್ ಅವರು ರವಿವಾರ ಇಲ್ಲಿ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.
ಸೋಂಕುಗಳ ಪ್ರಮಾಣ ಕಡಿಮೆಯಾಗುತ್ತಿದ್ದರೂ ಮತ್ತು ಎರಡನೇ ಅಲೆಯು ಶಮನಗೊಳ್ಳುತ್ತಿದ್ದರೂ ಹಲವಾರು ರಾಷ್ಟ್ರಗಳು ಎರಡಕ್ಕಿಂತ ಹೆಚ್ಚಿನ ಕೋವಿಡ್ ಅಲೆಗಳಿಗೆ ಸಾಕ್ಷಿಯಾಗಿರುವುದರಿಂದ ಕೆಟ್ಟ ಕಾಲವೀಗ ಮುಗಿಯಿತು ಎಂದು ಹೇಳುವುದು ಸರಿಯಲ್ಲ ಎಂದು ಎಚ್ಚರಿಕೆಯನ್ನೂ ಅವರು ನೀಡಿದರು.
ಪ್ರಸ್ತುತ ಕೋವಿಶೀಲ್ಡ್,ಕೋವ್ಯಾಕ್ಸಿನ್ ಮತ್ತು ಸ್ಪುಟ್ನಿಕ್ ಲಸಿಕೆಗಳನ್ನು ಮಾತ್ರ 18 ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತಿದ್ದು,ಇವು ಎರಡು ಡೋಸ್ ಲಸಿಕೆಗಳಾಗಿವೆ.
ಝೈಡಸ್ ಕ್ಯಾಡಿಲಾ ದೇಶಿಯವಾಗಿ ಅಭಿವೃದ್ಧಿಗೊಳಿಸಿರುವ ಸೂಜಿರಹಿತ ಕೋವಿಡ್ ಲಸಿಕೆ ಝೈಕೋವ್-ಡಿ ಭಾರತದಲ್ಲಿ 12ರಿಂದ 18ವರ್ಷ ವಯೋಮಾನದವರಿಗೆ ಲಭ್ಯವಾಗಲಿರುವ ಮೊದಲ ಲಸಿಕೆಯಾಗಲಿದೆ. ಅದು ಈಗಾಗಲೇ ತುರ್ತು ಬಳಕೆ ಅನುಮತಿ (ಇಯುಎ)ಯನ್ನು ಪಡೆದುಕೊಂಡಿದೆ. ಕೆಲವು ಷರತ್ತುಗಳೊಂದಿಗೆ ಕೋವ್ಯಾಕ್ಸಿನ್ ಲಸಿಕೆಯನ್ನು 2ರಿಂದ 18 ವರ್ಷ ವಯೋಮಾನದ ಮಕ್ಕಳಿಗೆ ಮತ್ತು ಹದಿಹರೆಯದವರಿಗೆ ನೀಡಲು ಇಯುಎ ಮಂಜೂರಾತಿಗೆ ಕೇಂದ್ರ ಔಷಧಿ ಪ್ರಾಧಿಕಾರದ ತಜ್ಞರ ಸಮಿತಿಯು ಶಿಫಾರಸು ಮಾಡಿದೆ. ಭಾರತೀಯ ಔಷಧಿ ಮಹಾ ನಿಯಂತ್ರಕರ ಅನುಮತಿ ದೊರೆತರೆ ಅದು ಝೈಕೋವ್-ಡಿ ಬಳಿಕ 18ವರ್ಷಕ್ಕಿಂತ ಕೆಳಗಿನವರು ಪಡೆಯಲಿರುವ ಎರಡನೇ ಲಸಿಕೆಯಾಗಲಿದೆ.
ಮಕ್ಕಳಿಗೆ ಕೋವಿಡ್ ಲಸಿಕೆಯನ್ನು ನೀಡಲು ಎಂದಿನಿಂದ ಆರಂಭಿಸಲಾಗುವುದು ಎನ್ನುವುದನ್ನು ಖಚಿತವಾಗಿ ಈಗಲೇ ಹೇಳಲು ಸಾಧ್ಯವಿಲ್ಲವಾದರೂ,ಲಸಿಕೆ ಕಾರ್ಯಕ್ರಮದಲ್ಲಿ ಝೈಡಸ್ ಕ್ಯಾಡಿಲಾದ ಲಸಿಕೆಯನ್ನು ಸೇರಿಸಲು ಸಿದ್ಧತೆಗಳು ನಡೆಯುತ್ತಿವೆ. ತರಬೇತಿ ಕಾರ್ಯಕ್ರಮವನ್ನು ಈಗಾಗಲೇ ನಡೆಸಲಾಗಿದೆ. ಲಸಿಕೆಯ ಅತ್ಯುತ್ತಮ ಬಳಕೆಗಾಗಿ ಪ್ರತಿರಕ್ಷಣೆ ಕುರಿತು ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ ಸಲಹೆಯನ್ನು ಪರಿಶೀಲಿಸಲಾಗುತ್ತಿದೆ. ಹೀಗಾಗಿ ಈ ಲಸಿಕೆ ನೀಡಿಕೆ ಶೀಘ್ರವೇ ಆರಂಭವಾಗಲಿದೆ ಎಂದು ಪಾಲ್ ತಿಳಿಸಿದರು.
ಮಕ್ಕಳು ಕೋವಿಡ್ ಪ್ರಸರಣ ಸರಪಳಿಯ ಭಾಗವಾಗಿದ್ದು,ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೆ ತುತ್ತಾಗುತ್ತಾರೆ. ಇದೇ ವೇಳೆ ಅವರಲ್ಲಿ ಕೋವಿಡ್ ಸೋಂಕುಗಳು ಅತ್ಯಂತ ಸೌಮ್ಯವಾಗಿದ್ದು,ಲಕ್ಷಣರಹಿತವಾಗಿರುತ್ತವೆ ಎಂದೂ ಪಾಲ್ ಹೇಳಿದರು.