ಪಠಾಣ್ಕೋಟ್ ಸಮೀಪದ ಸರೋವರದಲ್ಲಿ ಸೇನಾ ಹೆಲಿಕಾಪ್ಟರ್ ಪತನ: 75 ದಿನಗಳ ಬಳಿಕ ಪೈಲಟ್ ನ ಮೃತದೇಹ ಪತ್ತೆ

photo: timesofindia.indiatimes.com
ಹೊಸದಿಲ್ಲಿ, ಅ. 17: ಪಂಜಾಬ್ನ ಪಠಾಣ್ ಕೋಟ್ ಜಿಲ್ಲೆಯಲ್ಲಿರುವ ಜಲಾಶಯದಲ್ಲಿ ಆಗಸ್ಟ್ 3ರಂದು ಹೆಲಿಕಾಪ್ಟರ್ ಪತನಗೊಂಡು ನಾಪತ್ತೆಯಾಗಿದ್ದ ಪೈಲೆಟ್ನ ಮೃತದೇಹ ರವಿವಾರ ಪತ್ತೆಯಾಗಿದೆ. ಕ್ಯಾಪ್ಟನ್ ಜಯಂತ್ ಜೋಷಿ ಎರಡನೇ ಪೈಲಟ್ ಆಗಿದ್ದ ಸೇನಾ ಹೆಲಿಕಾಪ್ಟರ್ ರಂಜಿತ್ ಸಾಗರ್ ಸರೋವರದಲ್ಲಿ ಪತನಗೊಂಡಿತ್ತು.
ಸೇನಾ ಪಡೆ ಹಾಗೂ ನೌಕಾ ಪಡೆ 75 ದಿನಗಳ ಕಾಲ ಶೋಧ ಕಾರ್ಯಾಚರಣೆ ನಡೆಸಿ, ಕೊನೆಗೂ ಜಯಂತ್ ಜೋಷಿ ಅವರ ಮೃತದೇಹವನ್ನು ರವಿವಾರ ಸರೋವರದ ತಪ್ಪಲಿನಲ್ಲಿ ಪತ್ತೆ ಮಾಡಿದೆ. ಮೃತದೇಹ ಅಣೆಕಟ್ಟಿನ 60ರಿಂದ 70 ಮೀಟರ್ ಆಳದಲ್ಲಿ ಪತ್ತೆಯಾಯಿತು. ಸ್ಥಳೀಯ ವೈದ್ಯಕೀಯ ಪರೀಕ್ಷೆ ಬಳಿಕ ಜಯಂತ್ ಜೋಷಿ ಅವರ ಮೃತದೇಹವನ್ನು ಮುಂದಿನ ಪರೀಕ್ಷೆಗೆ ಪಠಾಣ್ ಕೋಟ್ನಲ್ಲಿರುವ ಸೇನಾ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿದೆ.
ಪಂಜಾಬ್ನ ಪಠಾಣ್ಕೋಟ್ ಜಿಲ್ಲೆ ಹಾಗೂ ಜಮ್ಮುಕಾಶ್ಮೀರದ ಕಥುವ ಜಿಲ್ಲೆಯ ಬಾಸೋಹಿಲ್ ತಾಲೂಕಿನಲ್ಲಿ ಈ ಸರೋವರ ಹಾಗೂ ಅಣೆಕಟ್ಟು ಇದೆ.
ಹೆಲಿಕಾಪ್ಟರ್ ಪತನಗೊಂಡ 12 ದಿನಗಳ ಬಳಿಕ ಆಗಸ್ಟ್ 15ರಂದು ಮೊದಲನೆಯ ಪೈಲೆಟ್ ಲೆಫ್ಟಿನೆಂಟ್ ಕರ್ನಲ್ ಎ.ಎಸ್. ಬತ್ತಾಹ್ ಅವರ ಮೃತದೇಹ ಸರೋವರದಲ್ಲಿ ಪತ್ತೆಯಾಗಿತ್ತು.
ಸರೋವರದಲ್ಲಿ ಪತನಗೊಂಡ ಸೇನೆಯ ವಾಯು ದಳಕ್ಕೆ ಸೇರಿದ ಈ ರುದ್ರಾ ಹೆಲಿಕಪ್ಟಾರ್ನಲ್ಲಿದ್ದ ಇಬ್ಬರು ಪೈಲಟ್ಗಳನ್ನು ಪತ್ತೆ ಹಚ್ಚಲು ಹಲವು ಸಂಸ್ಥೆಗಳ ತಂಡ ಶೋಧ ಕಾರ್ಯಾಚರಣೆ ಆರಂಭಿಸಿತ್ತು.