ಲಖಿಂಪುರ ಖೇರಿ ಹಿಂಸಾಚಾರ: ಪೊಲೀಸರ ವಿರುದ್ಧವೇ ಕೇಂದ್ರ ಸಚಿವ ಅಜಯ್ ಮಿಶ್ರಾ ಕೆಂಗಣ್ಣು

ಅಜಯ್ ಮಿಶ್ರಾ (Photo - ANI)
ಬರೇಲಿ: ಉತ್ತರ ಪ್ರದೇಶದ ಲಖಿಂಪುರ ಖೇರಿ ಹಿಂಸಾಚಾರದ ಸಂದರ್ಭದಲ್ಲಿ ಮೂವರು ಬಿಜೆಪಿ ಕಾರ್ಯಕರ್ತರು ಹತ್ಯೆಯಾಗಿರು ವುದು ದುರದೃಷ್ಟಕರ ಮತ್ತು ಈ ಘಟನೆ ಅಧಿಕಾರಿಗಳ ಸಮ್ಮುಖದಲ್ಲಿ ನಡೆದಿರುವುದು, ಪೊಲೀಸರು ಹಾಗೂ ಆಡಳಿತ ಯಂತ್ರದ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಕೇಂದ್ರ ಸಚಿವ ಅಜಯ್ ಮಿಶ್ರಾ ಕಿಡಿ ಕಾರಿದ್ದಾರೆ.
ಸಿಂಘಾ ಖುರ್ದ್ ಗ್ರಾಮದಲ್ಲಿ ನಡೆದ ಪ್ರಾರ್ಥನಾ ಸಭೆಯಲ್ಲಿ ಮಾತನಾಡಿದ ಕೇಂದ್ರದ ಗೃಹ ಖಾತೆ ರಾಜ್ಯ ಸಚಿವ ಮಿಶ್ರಾ, "ರೈತರು ರಸ್ತೆಯನ್ನು ವಶಪಡಿಸಿಕೊಳ್ಳಲು ಅವಕಾಶ ನೀಡಲಾಯಿತು. ಆದರೆ ಈ ಮಾರ್ಗದಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿಲ್ಲ. ಶ್ಯಾಮಸುಂದರ್ ನಿಶಾದ್ ಎಂಬ ಒಬ್ಬ ಕಾರ್ಯಕರ್ತ ಪೊಲೀಸರ ಬಳಿ ಜೀವಂತ ಇರುವಾಗಲೇ ಆಂಬ್ಯುಲೆನ್ಸ್ ತಲುಪಿದ್ದರು. ಆದರೆ ಅಲ್ಲಿಂದ ಎಳೆದು ಹಾಕಿ ಹತ್ಯೆ ಮಾಡಲಾಯಿತು. ತಪ್ಪಿತಸ್ಥ ಪೊಲೀಸರನ್ನು ಬಿಡಬಾರದು ಮತ್ತು ಸರ್ಕಾರ ಈ ಬಗ್ಗೆ ತನಿಖೆ ನಡೆಸಲಿದೆ. ಸರ್ಕಾರ ತನಿಖಾ ಏಜೆನ್ಸಿಗೆ ಸ್ವತಂತ್ರವಾಗಿ ತನಿಖೆ ನಡೆಸಲು ಅವಕಾಶ ಮಾಡಿಕೊಟ್ಟಿದೆ" ಎಂದು ಹೇಳಿದರು. ರೈತರು ದಾಖಲಿಸಿರುವ ಎಫ್ಐಆರ್ನಲ್ಲಿ ಮಿಶ್ರಾ ಕೂಡಾ ಆರೋಪಿ ಎನ್ನುವುದು ಗಮನಾರ್ಹ.
ಪ್ರತಿಭಟನಾಕಾರರ ಮೇಲೆ ಹರಿದ ವಾಹನಗಳ ಗುಂಪಿನಲ್ಲಿದ್ದ ಥಾರ್ ಜೀಪು ಸಚಿವರ ಹೆಸರಿನಲ್ಲಿ ನೋಂದಣಿಯಾಗಿದೆ. ಪ್ರಕರಣದ ಪ್ರಮುಖ ಆರೋಪಿ ಹಾಗೂ ಸಚಿವರ ಮಗನನ್ನು ಈಗಾಗಲೇ ಬಂಧಿಸಲಾಗಿದೆ. ಇದುವರೆಗೆ ಆರು ಮಂದಿಯನ್ನು ಪ್ರಕರಣ ಸಂಬಂಧ ಬಂಧಿಸಲಾಗಿದೆ.