ದಿಲ್ಲಿ ಹಿಂಸಾಚಾರ ಪ್ರಕರಣ: ಆರೋಪಿಗೆ ಅನಗತ್ಯ ಕಿರುಕುಳ ನೀಡಿದ ಪೊಲೀಸರಿಗೆ ದಂಡ ವಿಧಿಸಿದ ನ್ಯಾಯಾಲಯ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಫೆಬ್ರವರಿ 2020ರಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದ ಹಿಂಸಾಚಾರ ಪ್ರಕರಣವೊಂದರಲ್ಲಿನ ಆರೋಪಿಯೊಬ್ಬರಿಗೆ ಅನಗತ್ಯ ಕಿರುಕುಳ ನೀಡಿದ್ದಕ್ಕಾಗಿ ದಿಲ್ಲಿಯ ನ್ಯಾಯಾಲಯವು ಪೊಲೀಸರಿಗೆ ದಂಡ ವಿಧಿಸಿದೆ. ಈ ಕುರಿತಂತೆ ಪೊಲೀಸ್ ಆಯುಕ್ತರು ಹಾಗೂ ಇತರ ಹಿರಿಯ ಅಧಿಕಾರಿಗಳಿಗೆ ಹಸ್ತಕ್ಷೇಪ ನಡೆಸುವಂತೆ ನೀಡಿದ ಸತತ ನಿರ್ದೇಶನವು ಕಿವುಡು ಕಿವಿಗಳಿಗೆ ಬಿದ್ದಿವೆ ಎಂದು ನ್ಯಾಯಾಯ ಹೇಳಿದೆ.
ದೂರುಗಳನ್ನು ಪ್ರತ್ಯೇಕಿಸಲು ಹಾಗೂ ಎಲ್ಲಾ ಏಳು ಮಂದಿ ಆರೋಪಿಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಲೇವಾರಿಗೊಳಿಸಲು ಉಂಟಾದ ವಿಳಂಬಕ್ಕೆ ದಿಲ್ಲಿ ಪೊಲೀಸರಿಗೆ ರೂ 25,000 ದಂಡ ಪಾವತಿಸುವಂತೆ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅರುಣ್ ಕುಮಾರ್ ಗರ್ಗ್ ಆದೇಶಿಸಿದ್ದಾರೆ.
ಹಿಂಸಾಚಾರ ಪ್ರಕರಣಗಳ ಸೂಕ್ತ ತನಿಖೆಗೆ ಕೈಗೊಂಡ ಕ್ರಮಗಳ ಕುರಿತು ವಿಸ್ತೃತ ವರದಿ ನೀಡುವಂತೆ ನ್ಯಾಯಾಲಯವು ತನ್ನ ಅಕ್ಟೋಬರ್ 12ರ ಆದೇಶದಲ್ಲಿ ದಿಲ್ಲಿ ಪೊಲೀಸ್ ಆಯುಕ್ತ ರಾಕೇಶ್ ಆಸ್ಥಾನ ಅವರಿಗೆ ನಿರ್ದೇಶನ ನೀಡಿತ್ತು.
ದಿಲ್ಲಿಯ ಭಜನಪುರ ಪ್ರದೇಶದ ಮೂರು ಪ್ರತ್ಯೇಕ ಸ್ಥಳಗಳಲ್ಲಿ ನಡೆದ ಐದು ಹಿಂಸಾಚಾರ ಪ್ರಕರಣಗಳನ್ನು ಒಂದೇ ಎಫ್ಐಆರ್ನಲ್ಲಿ ಸೇರಿಸಿದ್ದೇಕೆ ಎಂದು ಸೆಪ್ಟೆಂಬರ್ನಲ್ಲಿ ನ್ಯಾಯಾಲಯ ಪ್ರಶ್ನಿಸಿತ್ತಲ್ಲದೆ ಅಕಿಲ್ ಅಹ್ಮದ್ ಎಂಬಾತನ ದೂರನ್ನು ಅದರಿಂದ ಪ್ರತ್ಯೇಕಿಸುವಂತೆ ಸೂಚಿಸಿತ್ತು.