ಸಂಪೂರ್ಣ ಲಸಿಕೀಕರಣ: ದ.ಕ. ಜಿಲ್ಲಾಡಳಿತದಿಂದ ಕಣ್ಗಾವಲು

ಮಂಗಳೂರು, ಅ.18: ದ.ಕ. ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಮಾಣ ತಗ್ಗುತ್ತಿದ್ದು, ಅರ್ಹ ಸಾರ್ವಜನಿಕರೆಲ್ಲರೂ 2 ಡೋಸ್ ಲಸಿಕೆಯನ್ನು ಪಡೆಯುವ ಮೂಲಕ ಕೋವಿಡ್‌ನಿಂದ ಸುರಕ್ಷಿತವಾಗಿಸುವ ನಿಟ್ಟಿನಲ್ಲಿ ನಿಗಾ ಇರಿಸಲು ದ.ಕ. ಜಿಲ್ಲಾಡಳಿತ ಮುಂದಾಗಿದೆ.
ಈಗಾಗಲೇ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿಯವರು ಸಿನೆಮಾ ಥಿಯೇಟರ್‌ಗಳ ಪ್ರವೇಶಕ್ಕೆ 2 ಡೋಸ್ ಲಸಿಕೆಯನ್ನು ಕಡ್ಡಾಯಗೊಳಿಸಿ ಆದೇಶಿಸಿದ್ದು, ಉಳಿದಂತೆ ಇತರ ಸಾರ್ವಜನಿಕ ಸ್ಥಳಗಳಲ್ಲಿಯೂ 2 ಡೋಸ್ ಕೋವಿಡ್ ಲಸಿಕೆ ಪಡೆದಿರುವು ದನ್ನು ಖಾತ್ರಿ ಪಡಿಸುವ ನಿಟ್ಟಿನಲ್ಲಿ ಮುಂಜಾಗೃತಾ ಕ್ರಮಗಳನ್ನು ಜಾರಿಗೊಳಿಸಲು ಮುಂದಾಗಿದ್ದಾರೆ.
ಪಾಲಿಕೆ ಆಯುಕ್ತ ಅಕ್ಷಿ ಶ್ರೀಧರ್ ಮೂಲಕ ಈಗಾಗಲೇ ನಗರದ ಮಾಲ್‌ಗಳ ಪ್ರವೇಶಕ್ಕೂ ಎರಡು ಡೋಸ್ ಲಸಿಕೆ ಪಡೆದಿರುವು ದನ್ನು ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಈಗಾಗಲೇ ಪಾಲಿಕೆ ಆಯುಕ್ತರಿಂದ ಆದೇಶಕ್ಕೂ ಕ್ರಮ ವಹಿಸಲಾಗಿದೆ.
‘‘ಕೋವಿಡ್ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದ್ದರೂ ನಾವು ಮೈಮರೆಯುವಂತಿಲ್ಲ. ಹಾಗಾಗಿ ಸಾರ್ವಜನಿಕ ಸ್ಥಳಗಳು, ಜನರು ಹೆಚ್ಚು ಸೇರುವಲ್ಲಿ ಮುಂಜಾಗೃತಾ ಕ್ರಮಗಳಿಗೆ ಚಿಂತಿಸಲಾಗಿದೆ. ಜಿಲ್ಲೆಯಲ್ಲಿ ಪ್ರಥಮ ಡೋಸ್ ಪಡೆದ ಕೆಲವರು 2ನೆ ಡೋಸ್‌ಗೆ ಮುಂದೆ ಬರುತ್ತಿಲ್ಲ. ಕೆಲವರು ಒಂದು ಡೋಸ್ ಲಸಿಕೆಯನ್ನು ಇನ್ನೂ ಪಡೆಯದವರಿದ್ದಾರೆ. ಹಾಗಾಗಿ ಜನತೆಯ ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಡಳಿತ ಕಠಿಣ ನಿರ್ಧಾರಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ. ಎಲ್ಲರೂ ಎರಡು ಡೋಸ್ ಕೋವಿಡ್ ನಿರೋಧಕ ಲಸಿಕೆ ಪಡೆಯುವುದನ್ನು ಕಟ್ಟುನಿಟ್ಟಿನಲ್ಲಿ ಅನುಷ್ಠಾನಗೊಳಿಸಲು, ಸಂಬಂಧಪಟ್ಟವರ ಜತೆ ಮಾತುಕತೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು. ಈಗಾಗಲೇ ಸಿನೆಮಾ ಥಿಯೇಟರ್ ಹಾಗೂ ಮಾಲ್‌ಗಳ ಪ್ರವೇಶಕ್ಕೆ ಎರಡು ಡೋಸ್ ಲಸಿಕೆ ಪಡೆದಿರುವುದನ್ನು ಖಾತರಿಪಡಿಸಲು ಕ್ರಮ ವಹಿಸಲಾಗಿದೆ’’ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಈ ಕುರಿತು ವಾರ್ತಾಭಾರತಿಗೆ ಪ್ರತಿಕ್ರಿಯಿಸಿದ್ದಾರೆ.







